

ಬೆಂಗಳೂರು/ಉಡುಪಿ: ದೇಶದ ಹಲವೆಡೆ 12 ಉಗ್ರರು ಸೆರೆಸಿಕ್ಕ ಬಳಿಕ ಕರ್ನಾಟಕದ ಉಗ್ರನೆಲೆ ಬೇರು ದಿನಕಳೆದಂತೆ ವ್ಯಾಪಿಸುತ್ತಿದ್ದು ಮಂಗಳವಾರ ಉಡುಪಿಯಲ್ಲಿ ಮತ್ತಿಬ್ಬರು ಶಂಕಿತರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ಹಾಗೂ ಕೋಲಾರದಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬಂಧಿತರನ್ನು ತಮಿಳುನಾಡಿನ ನಾಗಕೊಯಿಲ್ನ ಅಬ್ದುಲ್ ಶಮೀಮ್ ಹಾಗೂ ಕನ್ಯಾಕುಮಾರಿಯ ತೌಸೀಫ್ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಗುಜರಾತ್ಗೆ ತೆರಳುತ್ತಿದ್ದ ರೈಲಿನಲ್ಲಿ ಇವರನ್ನು ಬಂಧಿಸಲಾಗಿದೆ.
ಬಂಧಿತರು ತಮಿಳುನಾಡು ಹಿಂದು ಪರ ಸಂಘಟನೆಯ ಮುಖಂಡ ಸುರೇಶ್ ಹತ್ಯೆ ಪ್ರಕರಣದಲ್ಲಿ ಜ.7ರಂದು ತಮಿಳುನಾಡು ಪೊಲೀಸರಿಂದ ಬಂಧಿತರಾದ ಕ್ವಾಜಾ ಮೈನುದ್ದೀನ್, ಮಹಮದ್ ಹನೀಶ್, ಇಮ್ರಾನ್ ಖಾನ್, ಮಹಮದ್ ಝೈದ್ ಗ್ಯಾಂಗ್ ಜತೆ ಸಂಪರ್ಕದಲ್ಲಿದ್ದರು. ಅವರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದರು. ಐಸಿಸ್ನ ಶಂಕಿತ ಉಗ್ರ ಮೆಹಬೂಬ್ ಪಾಷಾ ನೇತೃತ್ವದಲ್ಲಿ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದ್ದ ಸಭೆಯಲ್ಲಿ ಈ ಇಬ್ಬರೂ ಪಾಲ್ಗೊಂಡಿದ್ದರು. ಐಸಿಸ್ ಸಂಘಟನೆಯ ಬಲವರ್ಧನೆಗೆ ಹಾಗೂ ಭಾರಿ ವಿಧ್ವಂಸಕ ಕೃತ್ಯ ಎಸಗಲು ತಯಾರಿ ಮಾಡಿಕೊಂಡಿದ್ದರು. ಮತ್ತಷ್ಟು ಹಿಂದು ಮುಖಂಡರ ಹತ್ಯೆಗೆ ಟಾರ್ಗೆಟ್ ಮಾಡಿದ್ದರು ಎಂಬ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೊಲೀಸ್ ಹಂತಕರು: ಸುರೇಶ್ ಹತ್ಯೆ ಪ್ರಕರಣದಲ್ಲಿ ಕ್ವಾಜಾ ಮೈನುದ್ದೀನ್, ಮಹಮದ್ ಅನೀಶ್, ಇಮ್ರಾನ್ ಖಾನ್ ಮಹಮದ್ ಝೈದ್ರನ್ನು ಬಂಧಿಸಲಾಗಿತ್ತು. ಇದರ ಸೇಡಿಗೆ ಜ.8ರಂದು ತಮಿಳುನಾಡು ಪೊಲೀಸ್ ಅಧಿಕಾರಿ ವಿಲ್ಸನ್ ಎಂಬುವರನ್ನು ಕಲಿಯಕ್ಕಾ ವಿಲೈ ಚೆಕ್ಪೋಸ್ಟ್ ಬಳಿ ಮಾರಕಾಸ್ತ್ರದಿಂದ ಹತ್ಯೆ ಮಾಡಿ ಕೇರಳದಲ್ಲಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದರು. ಕೆಲ ದಿನಗಳಿಂದ ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಬಂದಿರುವ ಬಗ್ಗೆ ಗುಪ್ತದಳ ಖಚಿತ ಮಾಹಿತಿ ಒದಗಿಸಿತ್ತು. ಅದನ್ನು ಆಧರಿಸಿ ಸಿಸಿಬಿ ಎಟಿಸಿ ತಂಡ, ಐಎಸ್ಡಿ ಪಡೆ ಹಾಗೂ ಉಡುಪಿ ಜಿಲ್ಲಾ ಪೊಲೀಸರು ಜತೆಗೂಡಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ಶಂಕಿತರ ಫೋನ್ ಕರೆಗಳ ಜಾಡು ಹಿಡಿದು ಉಡುಪಿ ನಗರದೆಲ್ಲೆಡೆ ಶೋಧಿಸಿದ್ದರು. ಮಂಗಳವಾರ ನಸುಕಿನ ಜಾವ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸೆರೆ ಹಿಡಿದಿದ್ದಾರೆ. ಬೆಂಗಳೂರಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಶಂಕಿತ ಉಗ್ರರನ್ನು ಬಂಧಿಸಿರುವ ಮಾಹಿತಿಯನ್ನು ಎನ್ಐಎ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಜರಾತ್ಗೆ ಎಸ್ಕೇಪ್ ಯತ್ನ: ಪೊಲೀಸ್ ಅಧಿಕಾರಿ ವಿಲ್ಸನ್ ಹತ್ಯೆ ಬಳಿಕ ತಮಿಳುನಾಡಿನಿಂದ ಕೇರಳದಲ್ಲಿ ಭೂಗತರಾಗಿದ್ದರು. ಎನ್ಐಎ, ಚೆನ್ನೈ ಪೊಲೀಸ್ ಹಾಗೂ ಬೆಂಗಳೂರು ಸಿಸಿಬಿ ಎಟಿಸಿ ತಂಡ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ತೀವ್ರ ಶೋಧ ನಡೆಸುತ್ತಿರುವ ಮಾಹಿತಿ ಆಧರಿಸಿ ಉತ್ತರ ಭಾರತದ ಕಡೆ ಎಸ್ಕೇಪ್ ಆಗಲು ಯತ್ನಿಸಿದ್ದರು. ಕೇರಳದ ತಿರುವನಂತಪುರದಿಂದ ರಾಜ್ಕೋಟ್ಗೆ ತೆರಳುತ್ತಿದ್ದ ರೈಲಿನಲ್ಲಿ ಉಡುಪಿಯ ಇಂದ್ರಾಳ ರೈಲ್ವೆ ನಿಲ್ದಾಣದಿಂದ ಗುಜರಾತ್ಗೆ ಹೊರಟಿದ್ದರು.
ಮೊಕ್ಕಾಂ ಹೂಡಿದ್ದ ಪೊಲೀಸರು: ಸೋಮವಾರ ರಾತ್ರಿಯಿಂದಲೇ ಹೆಚ್ಚಿನ ಸಂಖ್ಯೆ ಪೊಲೀಸರು ಗಸ್ತು ತಿರುಗುತ್ತಿದ್ದರು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ಮುಂತಾದ ಕಡೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾ ಗಿತ್ತು. ರೈಲ್ವೆ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಪೊಲೀಸರು ಶಂಕಿತರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಿದ್ದರು. ಶಂಕಿತರ ಪತ್ತೆಗೆ ಶ್ವಾನದಳವನ್ನೂ ಬಳಸಲಾಗಿತ್ತು.
ಖಚಿತಪಡಿಸಿದ ಗೃಹ ಸಚಿವರು: ಶಂಕಿತ ಉಗ್ರರ ಪತ್ತೆಗೆ ಸಿಸಿಬಿ ಎಟಿಸಿ ತಂಡ ಹಾಗೂ ಐಎಎಸ್ಡಿ ಪಡೆ ಜತೆಗೆ ಜಂಟಿ ಕಾರ್ಯಾ ಚರಣೆ ನಡೆಸಿರುವುದನ್ನು ಉಡುಪಿ ಜಿಲ್ಲಾ ಪೊಲೀಸರು ನಿರಾಕರಿಸಿದ್ದಾರೆ. ಆದರೆ, ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಕೇರಳದಿಂದ ಬಂದ ರೈಲಿನ ಲ್ಲಿದ್ದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಬ್ಬರು ಶಂಕಿತರ ಬಂಧನ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ಜಿಲ್ಲೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್ಐಎ ತಂಡ ಬುಧವಾರ ಉಡುಪಿಗೆ ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆಯುವ ಸಾಧ್ಯತೆ ಇದೆ.