

ವಿಬಾಗಲಕೋಟೆ:ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಮುಖಂಡ ಯಲ್ಲಪ್ಪ ಹೆಗಡೆ ಅವರನ್ನು ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ನಗರದ ವಾಸನದ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಯಲ್ಲಪ್ಪ ಹೆಗಡೆ ಅವರಿಂದ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಮುಧೋಳದಿಂದ ಬೀಳಗಿ ಪಟ್ಟಣಕ್ಕೆ ಭಿಕ್ಷಾಟನೆ ಅಭಿಯಾನ ಕಾರ್ಯಕ್ರಮಕ್ಕೆ ಹೊರಟಿದ್ದೆ. ಮಾರ್ಗ ಮಧ್ಯದಲ್ಲಿ ಮುಸುಕುಧಾರಿಗಳು ಒಂದೇ ತರಹದ ಸಮವಸ್ತ್ರ ಹಾಕಿ ನಿಂತಿದ್ದರು. ಮಂಕಿ ಕ್ಯಾಪ್ ಮೇಲೆ ಹೆಲ್ಮೆಟ್ ಸಹ ಇತ್ತು. ಬಹುಶಃ ನನ್ನ ಹೋರಾಟ ನಿಲ್ಲಿಸಲು ಪೊಲೀಸರು ಬಂಧಿಸಲು ಬಂದಿರಬಹುದೆಂದು ನಾನು ವಾಹನ ನಿಲ್ಲಿಸಿದೆ. ಆಗ ಕಣ್ಣಿಗೆ ಕಾರಪುಡಿ ಎರಚಿ ನನ್ನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಲು ಆರಂಭಿಸಿದರು. ಆಗ ನನ್ನ ವಾಹನದಲ್ಲಿದ್ದ ಸ್ನೇಹಿತರು ಅಲ್ಲಿಂದ ಪಾರಾದರು. ನನ್ನನ್ನೆ ಟಾರ್ಗೆಟ್ ಮಾಡಿ ಐದಾರು ಜನರು ಒಮ್ಮೆಲೆ ಹೊಡೆಯುತ್ತಿರುವುದರಿಂದ ನನಗೆ ತಪ್ಪಿಸಿಕೊಳ್ಳಲು ಆಗಲಿಲ್ಲ. ತಲೆಗೆ ಮಾರಕಾಸ್ತ್ರದಿಂದ ಹೊಡೆದರು. ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ನನ್ನ ಕೊಲೆ ಮಾಡಲು ಸುಫಾರಿ ಕೊಟ್ಟವರನ್ನು ಬಂಧಿಸಬೇಕು ಎಂದು ಯಲ್ಲಪ್ಪ ಹೆಗಡೆ ಸಚಿವರಿಗೆ ಮನವಿ ಮಾಡಿದರು.
ಸುಫಾರಿ ಕೊಟ್ಟವರು ಯಾರು ಎಂದು ಈಗಾಗಲೇ ನಾನು ಹೇಳಿದ್ದೇನೆ. ಹೋರಾಟ ಹತ್ತಿಕ್ಕಲು ಈ ರೀತಿ ಮಾರಣಾಂತಿಕ ಹಲ್ಲೆ ಮಾಡಿದರೆ ಹೇಗೆ? ಹಿಂದೆ ಇರುವವರನ್ನು ಬಂಧಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಈ ಬಗ್ಗೆ ತನಿಖೆ ನಡೆದಿದೆ. ಹಲ್ಲೆ ಮಾಡಿದವರು ಹಾಗೂ ಅದಕ್ಕೆ ಯಾರಾದರೂ ಕುಮ್ಮಕ್ಕು ಕೊಟ್ಟಿದ್ದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪುರ, ಹೋರಾಟಗಾರ ಯಲ್ಲಪ್ಪ ಹೆಗಡೆ ಮೇಲೆ ಅಟೆಮ್ಟ್ ಟು ಮರ್ಡರ್ ಆಗಿದೆ. ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಈ ಕೃತ್ಯವನ್ನು ಯಾರೇ ಮಾಡಿದ್ದರೂ ಅದನ್ನು ಖಂಡಿಸುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಅವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಹಲ್ಲೆ ಮಾಡಿದವರ ಫೋನ್ ಕಾಲ್ ಪರಿಶೀಲನೆ ಮಾಡುತ್ತಿದ್ದೇವೆ. ತನಿಖೆಯ ಎಲ್ಲ ವಿವರ ಹೇಳಲು ಆಗಲ್ಲ. ಇದರಲ್ಲಿ ಯಾರೇ ಇದ್ದರೂ ಅವರನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ಒಬ್ಬ ಹೋರಾಟಗಾರನ ಮೇಲೆ ಈ ರೀತಿ ಆಗಬಾರದು. ನಮ್ಮ ಸರ್ಕಾರ ಹೋರಾಟಗಾರರಿಗೆ ಬೆದರಿಕೆ ಬಾರದಂತೆ ನೋಡಿಕೊಳ್ಳುತ್ತದೆ. ಸದ್ಯ ನಡೆದಿರುವ ಪ್ರಕರಣದಲ್ಲಿ ಆರೋಪಿಗಳು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರಲ್ಲಿ ಒಬ್ಬ ಮುಗಳಖೋಡ, ವಿಜಯಪುರ, ಗೋಕಾಕ ಮೂಲ ಹೀಗೆ ಬೇರೆ ಬೇರೆ ಕಡೆಯವರು ಇದ್ದಾರೆ ಎಂದು ಗೊತ್ತಾಗಿದೆ. ಯಾರೇ ಇದ್ದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಘಟನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಸಚಿವರಿಗೆ ಕರವೇ ಮನವಿ : ಇದೇ ವೇಳೆ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭೇಟಿ ಮಾಡಿ ಆರೋಪಿಗಳನ್ನು ಬಂಧಿಸಿದ್ದನ್ನು ಸ್ವಾಗತಿಸುತ್ತೇವೆ. ಆದರೆ, ಇದರ ಹಿಂದೆ ಇರುವ ಪ್ರಭಾವಿಗಳನ್ನು ಸಹ ಬಂಧಿಸುವಂತೆ ಸಚಿವರಿಗೆ ಆಗ್ರಹಿಸಿದರು.
ಆರು ಜನ ಕಾರ್ಖಾನೆ ಕಾರ್ಮಿಕರ ಬಂಧನ : ಯಲ್ಲಪ್ಪ ಹೆಗಡೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಧೋಳ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕೃತ್ಯಕ್ಕೆ ಬಳಕೆ ಮಾಡಿದ್ದ ಬೊಲೆರೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಜಯಪ್ರಕಾಶ್ ತಿಳಿಸಿದ್ದಾರೆ.
ಮರೇಗುದ್ದಿ ಗ್ರಾಮದ ಬಸವರಾಜ್, ಮೋಹರೆ ಗ್ರಾಮದ ಅಶೋಕ್, ಹಳಿಕಾದ್ರೊಳ್ಳಿ ಗ್ರಾಮದ ಬಾಬು, ಗೋಕಾಕ್‌ನ ಉಮರಫಾರುಖ, ಮುಗಳಖೋಡದ ರಾಜೇಸಾಬ ಎಂದು ಗುರುತಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಮುಧೋಳ ಕಾರ್ಖಾನೆ ಹಾಗೂ ಇನ್ನು ನಾಲ್ಕು ಜನ ಕುಳಗೇರಿ ಬಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮ ಸಾಹೇಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನಕರ ಪೋಸ್ಟ್ ಮಾಡುತ್ತಿದ್ದ. ಇದರಿಂದ ನಮ್ಮ ಮನಸ್ಸಿಗೆ ಬಹಳಷ್ಟು ನೋವು ಆಗಿತ್ತು. ಯಲ್ಲಪ್ಪನ ಮೇಲೆ ಹಲ್ಲೆ ನಡೆಸಿದ್ದಾಗಿ ಪ್ರಾಥಮಿಕ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ ಎಂದು ತಿಳಿಸಿದ್ದಾರೆ.
ಎರಡು ಎಫ್‌ಐಆರ್ : ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಪ್ಪ ಹೆಗಡೆ ಹಾಗೂ ಅಂದು ಘಟನೆ ನಡೆದ ವೇಳೆ ಯಲ್ಲಪ್ಪನ ಜತೆ ಇದ್ದ ಹನುಮಂತ ಶಿಂಧೆ ಎನ್ನುವವರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.