

ಹಳಿಯಾಳ: ತಾಲೂಕಿನ ಗಡಿಯಾಳ ಗ್ರಾಮದಿಂದ ಮೇ 29 ರಂದು ಕಳ್ಳತನ ಮಾಡಲಾಗಿದ್ದ ಲಕ್ಷಾಂತರ ರೂ ಬೆಲೆಯ 18 ಕುರಿಗಳನ್ನು ಕಳ್ಳರ ಸಮೇತ ಹೆಡೆಮುರಿ ಕಟ್ಟುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಮುಂಡವಾಡ ಗ್ರಾಮದ ರೈತ ರೆಹಮಾನ್ ಸಾಬ್ ಮುಕ್ತುಂಸಾಬ ಕತಾಲ್ ಈತನ ಗಡಿಯಾಳ ಗ್ರಾಮದ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ 18 ಕುರಿಗಳನ್ನು ಕಳ್ಳರು ಮೇ.29 ರಂದು ಕದ್ದೊಯ್ದಿದ್ದರು. ಈ ಕುರಿತು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದಿದ್ದ ಹಳಿಯಾಳ ಪೋಲೀಸರು ಕಳ್ಳತನದ ಜಾಡನ್ನು ಯಶಸ್ವಿಯಾಗಿ ಭೇದಿಸಿದ್ದು, ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮದ ಯಲ್ಲಪ್ಪ ಪರಶುರಾಮ ಭಜಂತ್ರಿ ಎಂಬ ಆರೋಪಿಯನ್ನು ಬಂಧಿಸಿ 16 ಕುರಿಗಳ ಜೊತೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತು ಪಡಿಸಿಕೊಂಡು ಆರೋಪಿಯನ್ನು ಹಳಿಯಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಪೋಲಿಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ ಎನ್, ಅಡಿಷನಲ್ ಎಸ್ಪಿ ಸಿ.ಟಿ. ಜಯಕುಮಾರ, ದಾಂಡೇಲಿ ವಿಭಾಗದ ಡಿವಾಯ್ಎಸ್ಪಿ ಶಿವಾನಂದ ಮದರಕಂಡಿ, ಸಿಪಿಆಯ್ ಜಯಪಾಲ್ ಪಾಟೀಲ್ ಅವರ ಮಾರ್ಗದರ್ಶನ ದಲ್ಲಿ ಪಿಎಸ್ಐಗಳಾದ ಮಹಾಂತೇಶ ಕುಂಬಾರ, ಅಮೀನ ಅತ್ತಾರ ಇವರ ನೇತ್ರತ್ವದಲ್ಲಿ ಪೋಲೀಸ್ ತಂಡ ರಚಿಸಿ ಎ ಎಸ್ಐ ಸುರೇಶ ಘಾಟಗೆ, ಸಿಎಚ್ಸಿಗಳಾದ ಮಹ್ಮದ್ ಇಸ್ಮಾಯಿಲ್ ಕೋಣನಕೇರಿ , ಎಮ್ .ಎಮ್ . ಮುಲ್ಲಾ, ಸಿಪಿಸಿ ಗಳಾದ ರಾಚಪ್ಪ ಧನಗರ, ಶ್ರೀಶೈಲ್ ಜಿ.ಎಮ್, ಉಮೇಶ ಹನಗಂಡಿ, ಕಾಶಿನಾಥ ಬಿಳ್ಳೂರ,ಭೀಮಪ್ಪಾ ಅವರುಗಳು ಕಾರ್ಯಾಚರಣೆ ನಡೆಸಿ ಆಪಾದಿತನನ್ನು ಕಳುವಿನ ಸರಕಿನೊಂದಿಗೆ ಬಂಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಉತ್ತರಕನ್ನಡ ಎಸ್ಪಿ ವಿಷ್ಣುವರ್ಧನ ಎನ್ ರವರು ಪ್ರಕರಣ ಪತ್ತೆಹಚ್ಚಿದ ತಂಡಕ್ಕೆ ಶ್ಲಾಘಿಸಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.