

ಕೋಲಾರ: ಶ್ರೀಗಂಧ ಮರಗಳನ್ನು ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿ ಗ್ರಾಮದ ವೆಂಕಟರವಣಪ್ಪ (50) ಬಂಧಿಸಿ, 15 ಕೆಜಿ ತೂಕದ ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋಲಾರ ತಾಲೂಕಿನ ವೆಲಗಲಬುರ್ರೆ ಗ್ರಾಮದ ಪ್ರಸಾದ್ ಎಂಬುವರು ತಮ್ಮ ತೋಟದ ಸುತ್ತಲೂ ಸುಮಾರು 200 ಶ್ರೀಗಂಧದ ಮರಗಳನ್ನು ಬೆಳೆಸಿದ್ದರು. 2024ರ ಜು.23ರಂದು ಮಧ್ಯರಾತ್ರಿ 5 ಮರಗಳು ಕಳವಾಗಿದ್ದು, 6 ಮರಗಳಿಗೆ ರಂಪದಲ್ಲಿ ಸ್ವಲ್ಪ ಕೊಯ್ದು ಹೋಗಿದ್ದ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಎಸ್ಪಿ ಬಿ.ನಿಖಿಲ್, ಎಎಸ್ಪಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಚ್.ನಾಗ್ತೆ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ.ಕಾಂತರಾಜ ಮತ್ತು ತಂಡದ ಸಾಧಿಕ್ಪಾಷ, ರಾಜೇಶ್, ಜಿಲ್ಲಾ ಅಪರಾಧ ಪತ್ತೆದಳ ಸಿಬ್ಬಂದಿ ರಾಘವೇಂದ್ರ, ಆಂಜಿನಪ್ಪ, ನವೀನ್, ಸತೀಶ್, ಜಿಲ್ಲಾ ತಾಂತ್ರಿಕ ವಿಭಾಗದ ಮುರಳಿ ಆರೋಪಿಯನ್ನು ಮಾಲು ಸಮೇತ ಕೋಲಾರ-&ಶ್ರೀನಿವಾಸಪುರ ರಸ್ತೆಯ ಮೂರಾಂಡಹಳ್ಳಿ ಕ್ರಾಸ್ ಬಳಿ ಬಂಧಿಸಿದ್ದಾರೆ.
ಕೋಲಾರ: ನಗರದ ಟೇಕಲ್ ರಸ್ತೆಯಲ್ಲಿ 2 ತಿಂಗಳ ಹಿಂದೆ ಅಂಗಡಿಗಳ ಶೆೆಲ್ಟರ್ ಒಡೆದು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನ್ಯೂ ತಿಪ್ಪಸಂದ್ರ ಸುಧಾಮನಗರದ ನಿವಾಸಿ ಆರ್.ವಿನೋದ್ (19), ಎಸ್.ಪ್ರವಿಣ್ಕುಮಾರ್ (19) ಹಾಗೂ ಜ್ಯೋತಿನಗರ ರೆಡ್ಡಿಪಾಳ್ಯದ ಎಫ್.ರಿಯಾನ್ (19) ಬಂಧಿತರು. ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಕೆಜಿಎಫ್ ಪರಿವೀಕ್ಷಣಾಲಯದಲ್ಲಿ ದಾಖಲಿಸಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ಜ.28ರ ಮಧ್ಯರಾತ್ರಿ ಕೋಲಾರದ ಕೋಗಿಲಹಳ್ಳಿ ದರ್ಗಾ ಬಳಿಯ ಪಂಪ್ಹೌಸ್ ಸಮೀಪ ಹೈವೇ ಸರ್ವೀಸ್ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ 3 ದ್ವಿಚಕ್ರ ವಾಹನಗಳನ್ನು ನಿಲ್ಲಿಸಿಕೊಂಡು ಕೈಗಳಲ್ಲಿ ತಲ್ವಾರ್, ಚಾಕುಗಳು, ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಂ.ಸದಾನಂದ, ಪಿಎಸ್ಐ ಹೊನ್ನೇಗೌಡ, ಸೈಯದ್ ಖಾಸಿಂ ಮತ್ತು ಸಿಬ್ಬಂದಿ ಮೋಹನ್, ನಾರಾಯಣಸ್ವಾಮಿ, ಮೆಹಬೂಬ್ಪಾಷಾ, ಶ್ರೀನಾಥ, ಕಿಶೋರ, ಶಾಮೂರ್ತಿ, ಬಾಲಾಜಿ, ಗಂಗಾಧರ, ಕಾರ್ತಿಕ, ತ್ಯಾಗರಾಜ, ಹೇಮಂತಕುಮಾರ್ ಭಾಗವಹಿಸಿದ್ದರು.