ವಿಚರಣಾಧೀನ ಕೈದಿಗಳ ಮಾರಾಮಾರಿ

crime
Published on

ಹುಬ್ಬಳ್ಳಿ: ಇಲ್ಲಿನ ಉಪಕಾರಾಗೃಹದಲ್ಲಿ ಕ್ಷುಲ್ಲಕ ವಿಚಾರಕ್ಕೆ ವಿಚಾರಣಾಧೀನ ಕೈದಿಗಳ ಗುಂಪು, ಬಂಧಿತ ಸಹೋದರರ ಮೇಲೆ ಹಾಗೂ ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗಲು ಕೈದಿಗಳ ಕುಟುಂಬದ ಸದಸ್ಯರು ಸಂದರ್ಶನ ಕೊಠಡಿಯಲ್ಲಿ ಶುಕ್ರವಾರ ತಮ್ಮವರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ಈ ವೇಳೆ ಬಂಧಿತ ವಿನಾಯಕ ಭಂಡಾರಿ ಹಾಗೂ ಅಭಿಷೇಕ ಭಂಡಾರಿ ಎಂಬುವರ ಸಹೋದರಿಯ ಕಾಲನ್ನು ಸಂದರ್ಶಕರೊಬ್ಬರು ತುಳಿದಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ವಾದ ನಡೆದಿದೆ. ಅಷ್ಟೇ ಅಲ್ಲದೆ ಬಾಬು ಬಳ್ಳಾರಿ, ಪ್ರಜ್ವಲ್ ನೆಟ್ಟೂರು, ದತ್ತಾತ್ರೇಯ ಮತ್ತಿಕಟ್ಟಿ ಎಂಬುವವರು, ಬಂಧಿತ ಭಂಡಾರಿ ಸಹೋದರರ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ.
ಅಲ್ಲಿಯೇ ಕರ್ತವ್ಯದಲ್ಲಿದ್ದ ಜೈಲರ್ ಹಾಗೂ ಸಿಬ್ಬಂದಿ ಜಗಳ ಬಿಡಿಸಿ ಒಳಗಡೆ ಕರೆದೊಯ್ದಿದ್ದಾರೆ. ಆಗ ಪ್ರಜ್ವಲ್ ಸ್ಥಳದಲ್ಲಿದ್ದ ಕಲ್ಲಿನಿಂದ ಎಸೆದಾಗ ಭಂಡಾರಿ ಸಹೋದರರಿಗೆ ತಗುಲಿ ಗಾಯಗಳಾಗಿವೆ. ಬಳಿಕ ಇವರನ್ನು ಕ್ವಾರಂಟೈನ್ ವಿಭಾಗಕ್ಕೆ ಕಳಿಸಲಾಗಿತ್ತು.
ಅಲ್ಲಿಯೂ ಬಾಬು, ಪ್ರಜ್ವಲ್, ದತ್ತಾತ್ರೇಯ, ಡೇವಿಡ್, ಕುಮಾರ ಯಾಮರ್ತಿ ಸೇರಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕೆಲಸಕ್ಕೆ ಅಡ್ಡಿ ಪಡಿಸಿ, ಎಳೆದಾಡಿ ಹಲ್ಲೆ ಮಾಡಿದ್ದಾರೆ. ನಂತರ ಜೀವ ಬೆದರಿಕೆ ಹಾಕಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಪಕಾರಾಗೃಹದ ಅಧೀಕ್ಷಕಿ ನಾಗರತ್ನ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net