

ಬೆಂಗಳೂರು: ಲೋಕಾಯುಕ್ತ ಇನ್‌ಸ್ಪೆಕ್ಟರ್ ಸೋಗಿನಲ್ಲಿ ಕಾರ್ಯಪಾಲಕ ಇಂಜಿನಿಯರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರಪಾಳ್ಯದ ತ್ಯಾಗರಾಜ್ (೬೮) ಬಂಧಿತ ಆರೋಪಿ.
ಆರೋಪಿಯು ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಆದ ಕೆ.ಬಿ ರಾಮದಾಸಪ್ಪ ಅವರಿಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸೋಗಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಈ ಸಂಬಂಧ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ತ್ಯಾಗರಾಜ್ ಅ.೪ ರಂದು ರಾಮದಾಸಪ್ಪ ಅವರಿಗೆ ಕರೆ ಮಾಡಿ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಮುಕ್ತಾಯಗೊಳಿಸಲು ಮೇಲಾಧಿಕಾರಿಗಳಿಗೆ ದೊಡ್ಡಮಟ್ಟದಲ್ಲಿ ವ್ಯವಹಾರ ಮಾಡಬೇಕಾಗಿರುತ್ತದೆ. ಇಲ್ಲವಾದರೆ ನಿಮಗೆ ತೊಂದರೆಯಾಗುವ ಸಂಭವವಿದೆ. ಕೂಡಲೇ ನನ್ನನ್ನು ಭೇಟಿ ಮಾಡಿ ಎಂದು ಹೇಳಿದ್ದ. ರಾಮದಾಸಪ್ಪ ಅವರು ಯಾವುದೋ ೇಕ್ ಕಾಲ್ ಇರಬೇಕೆಂದು ಸುಮ್ಮನಾಗಿದ್ದಾರೆ.
ಧ್ವನಿ ಬದಲಾಯಿಸಿ ಮಾತನಾಡಿದ್ದ
ಅ.೨೭ ರಂದು ರಾಮದಾಸಪ್ಪ ಅವರು ಇನ್ಫೆಂಟ್ರಿ ರಸ್ತೆಯಲ್ಲಿರುವ ನಮ್ಮ ಇಲಾಖೆಯ ವಿ.ಜೆ.ಎನ್.ಎಲ್.ಎಂ.ಡಿ ಕಚೇರಿಯಲ್ಲಿದ್ದಾಗ ಮತ್ತೆ ಕರೆ ಮಾಡಿದ್ದ ಆರೋಪಿಯು ನಾನು ಲೋಕಾಯುಕ್ತ ಇನ್‌ಸ್ಪೆಕ್ಟರ್ ಮಾತನಾಡುವುದು ನಮ್ಮ ಎಡಿಜಿಪಿ ಸಾಹೇಬರು ನಿಮ್ಮ ಜತೆ ಮಾತನಾಡುತ್ತಾರೆ ಎಂದು ಹೇಳಿ ಧ್ವನಿ ಬದಲಾಯಿಸಿ ಆತನೆ ಮಾತನಾಡಿ ನಿಮ್ಮ ಮೇಲೆ ಆರೋಪ ಕೇಳಿ ಬಂದಿದ್ದು ಅದನ್ನು ಮುಕ್ತಾಯ ಮಾಡಲು ನಮ್ಮ ಲೋಕಾಯುಕ್ತ ಇನ್‌ಸ್ಪೆಕ್ಟರ್ ಭೇಟಿ ಮಾಡಿ ಎಂದು ತಿಳಿಸಿದ್ದ. ಈ ಬಗ್ಗೆ ಅನುಮಾನಗೊಂಡ ರಾಮದಾಸಪ್ಪ ಅವರು ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ಅನಾಮಧೇಯ ವ್ಯಕ್ತಿಗಳು ನನ್ನಿಂದ ಬಲವಂತವಾಗಿ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ರೀತಿ ಕರೆಗಳನ್ನು ಮಾಡುತ್ತಿದ್ದು, ಇದರಿಂದ ನನಗೆ ಸರ್ಕಾರಿ ಕೆಲಸ ಮಾಡಲು ಮಾನಸಿಕವಾಗಿ ತೊಂದರೆಯಾಗುತ್ತಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.