

ಕಲಘಟಗಿ: ತಾಲೂಕಿನ ಜಿನ್ನೂರು ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕಲಘಟಗಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿನ್ನೂರು ಗ್ರಾಮದ ನಿಂಗಪ್ಪ ಬೂದಪ್ಪ ನವಲೂರು (33) ಎನ್ನುವ ಯುವಕ ಗ್ರಾಮದ ಹೊರವಲಯದ ದನದ ಕೊಟ್ಟಿಗೆಯಲ್ಲಿ ಕೊಲೆಯಾಗಿದ್ದ. ಐದು ದಿನಗಳಲ್ಲಿ ಹಸಮಣೆ ಏರಬೇಕಿದ್ದ ಯುವಕ ಕೊಲೆಯಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕೊಲೆಗಡುಕರನ್ನು ಎರಡೇ ದಿನದಲ್ಲಿ ಪತ್ತೆ ಮಾಡಲಾಗಿದೆ. ಮಹಿಳೆ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ನಿಂಗಪ್ಪ ಕೊಲೆಗೆ ಕಾರಣವಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಕಲಘಟಗಿ ಪೊಲೀಸ್ ಠಾಣೆಗೆ ಭಾನುವಾರ ಭೇಟಿ ನೀಡಿ, ಕೊಲೆ ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೊಷಿಸಿದರು.
ಸಿಪಿಐ ಶ್ರೀಶೈಲ ಕೌಜಲಗಿ, ಪೊಲೀಸ್ ಸಿಬ್ಬಂದಿ ಇದ್ದರು.