

ಮಂಡ್ಯ: ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಏ.9ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ್(24) ಎಂಬಾತನ ಕೊಲೆ ಮಾಡಿದ ಆರೋಪದ ಮೇಲೆ ಸ್ವರ್ಣಸಂದ್ರ ಬಡಾವಣೆಯ ಭರತ ಅಲಿಯಾಸ್ ಸಾಹುಕಾರ(26) ಹಾಗೂ ಚಿಕ್ಕೇಗೌಡನದೊಡ್ಡಿಯ ಪ್ರಮೋದ್ ಅಲಿಯಾಸ್ ಕಾಡು(24) ಬಂಧಿತರು.
9ರಂದು ರಾತ್ರಿ 11.30ಕ್ಕೆ ಸ್ವರ್ಣಸಂದ್ರದ ದಾಸೇಗೌಡನ ಬೀದಿ ನಾಗಲಿಂಗೇಶ್ವರ ದೇವಾಲಯದ ಬಳಿ ಕೆಂಪೇಗೌಡನ ಬೀದಿ ನಿವಾಸಿಗಳಾದ ಅಕ್ಷಯ್ ಹಾಗೂ ಆತನ ಸ್ನೇಹಿತ ಹೇಮಂತ್ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಈ ವೇಳೆ ಅಕ್ಷಯ್ ಸ್ಥಳದಲ್ಲೇ ಮೃತಪಟ್ಟರೆ, ಹೇಮಂತ್ ಗಂಭೀರ ಗಾಯಗೊಂಡಿದ್ದ. ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಂತೆಯೇ ಈತ ಪೂರ್ವ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು, ಏ.12ರಂದು ಮದ್ದೂರು-ಕೆ.ಎಂ.ದೊಡ್ಡಿ ರಸ್ತೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖಾ ತಂಡದಲ್ಲಿದ್ದ ಮಂಡ್ಯ ನಗರ ವೃತ್ತದ ಸಿಪಿಐ ಜಾಯ್ ಆಂಥೋಣಿ, ಪೂರ್ವ ಠಾಣೆ ಎಸ್‌ಐ ಶೇಷಾದ್ರಿಕುಮಾರ್, ಎಎಸ್‌ಐಗಳಾದ ಲಿಂಗರಾಜು, ಮಹೇಶ್, ಸಿಬ್ಬಂದಿ ಅನಿಲ್‌ಕುಮಾರ್, ಉಮರ್ ಅಹಮದ್, ಫಾರೂಖಿ, ಲೋಕೇಶ್, ಆನಂದ್, ಶ್ರೀನಿವಾಸ, ಮಂಜುನಾಥ, ಲೋಕೇಶ್ ಮತ್ತು ರವಿಕಿರಣ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಭಿನಂದಿಸಿದ್ದಾರೆ.