ಚಿನ್ನ, ಬೆಳ್ಳಿ ಆಭರಣ ದೋಚಿದ್ದವನ ಬಂಧನ

OCTOBER-2024-19-04
ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿರುವ ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳು
Published on

ಮದ್ದೂರು: ಮನೆ ಬಾಗಿಲು ಮುರಿದು ಚಿನ್ನ, ಬೆಳ್ಳಿ ದೋಚಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮನಗರ ಜಿಲ್ಲೆಯ, ಕನಕಪುರ ತಾಲೂಕಿನ ಮೇಳೆಕೋಟೆ ಗ್ರಾಮದ ಎಚ್.ಹನುಮಂತುರಾಜು ಬಂಧಿತ. ಈತನ ಬಳಿ ಇದ್ದ 142 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.300 ಗ್ರಾಂನ ಬೆಳ್ಳಿ ಪದಾರ್ಥವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.


ಪಟ್ಟಣದ ಹೊಳೆಬೀದಿ ನಿವಾಸಿ ಎಂ.ಆರ್.ಕೆಂಪಶೆಟ್ಟಿ ಮತ್ತು ರಂಗಸ್ವಾಮಿ ಸೇರಿದಂತೆ ಕೆ.ಎಚ್.ನಗರ ಬಡಾವಣೆಯ ಡಾ.ಶಿವರಾಮು ಅವರ ಮನೆಯಲ್ಲಿ ಈತ ಕಳ್ಳತನ ಮಾಡಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ, ಡಿವೈಎಸ್‌ಪಿ ಕೃಷ್ಣಪ್ಪ ಹಾಗೂ ಸಿಪಿಐ ಗಳಾದ ಶಿವಕುಮಾರ್ ಹಾಗೂ ವೆಂಕಟೇಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವೇಳೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ವೇಳೆ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯು ಈ ಹಿಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಕನಕಪುರ, ಮಾದನಾಯಕನಹಳ್ಳಿ, ತಾವರೆಕೆರೆ ಮತ್ತು ಮಳವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಮದ್ದೂರು ಠಾಣೆಯ ಸಿಪಿಐಗಳಾದ ಶಿವಕುಮಾರ್ ಹಾಗೂ ಗ್ರಾಮಾಂತರ ಸಿಪಿಐ ವೆಂಕಟೇಗೌಡ, ಪಿಎಸ್‌ಐ ಮಂಜುನಾಥ್, ರವಿ, ಸಿಬ್ಬಂದಿ ಚಿರಂಜೀವಿಪೂಜಾರ್, ಪ್ರಸನ್ನ, ವಿಷ್ಣುವರ್ಧನ, ಓಂಕಾರಪ್ಪ, ಗಿರೀಶ್, ರವಿಕಿರಣ್, ಲೋಕೇಶ್, ರಂಜಿತ್, ಚಲುವರಾಜ್ ಇದ್ದರು. ತಂಡವನ್ನು ಎಸ್ಪಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net