ಪತ್ನಿ ಕೊಲ್ಲಲು ಪಿಸ್ತೂಲ್ ಖರೀದಿಸಿದವ ಈಗ ಪೊಲೀಸರ ಅತಿಥಿ!

Screenshot_2023-06-17-17-37-34-84.jpg
Published on

ಬೆಳಗಾವಿ: ಪತಿಯ ಕಾಟಕ್ಕೆ ಬೇಸತ್ತು ಡಿವೋರ್ಸ್ ಆಗಿದ್ದ ಪತ್ನಿಯನ್ನು ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸಚಿನ್ ಬಾಬಾಸಾಹೇಬ್ ರಾಯಮಾನೆ ಬಂಧಿತ ಆರೋಪಿ. ಪತ್ನಿಗೆ ಬೇರೆಯವರ ಜತೆಗೆ ಅಕ್ರಮ ಸಂಬಂಧ ಇದೆ ಎಂದು ಸಚಿನ್ ಅನುಮಾನಿಸುತ್ತಿದ್ದ. ಈತನ ಸಂಶಯ ಪಿಶಾಚಿಗೆ ಬೇಸತ್ತ ಪತ್ನಿ ಹರ್ಷಿತಾ 15 ದಿನಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದರು. ಇದರಿಂದ ದ್ವೇಷ ಬೆಳೆಸಿಕೊಂಡ ಸಚಿನ್ ಡಿವೋರ್ಸ್ ಆದ ಪತ್ನಿ ಕೊಲ್ಲಲು ಕಂಟ್ರಿ ಪಿಸ್ತೂಲ್ ಖರೀದಿಸಿದ್ದ. ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಕುಪವಾಡ ಗ್ರಾಮದಲ್ಲಿ ಪಿಸ್ತೂಲ್ ಖರೀದಿಸಿ, ಮೀರಜ್ ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಅನುಮಾನ ಬಂದ ಹಿನ್ನೆಲೆ ಪೊಲೀಸರು ಸಚಿನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನ ಬಳಿ ಪಿಸ್ತೂಲ್ ಇರುವುದು ಕಂಡು ಬಂದಿದೆ. ವಿಚಾರಣೆ ವೇಳೆ ಸಚಿನ್ ತಾನು ರೂಪಿಸಿದ್ದ ಸಂಚಿನ ಬಗ್ಗೆ ಪೊಲೀಸರು ಎದುರು ಬಾಯಿ ಬಿಟ್ಟಿದ್ದಾನೆ. ಹೆಂಡತಿಯನ್ನು ಹತ್ಯೆ ಮಾಡುವ ಸಲುವಾಗಿ ಪಿಸ್ತೂಲ್ ಖರೀದಿಸಿದ್ದಾಗಿ ಬಾಯ್ದಿಟ್ಟಿದ್ದಾನೆ. ಮೀರಜ್‌ನ ಗಾಂಧೀ ಚೌಕ್ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡು ಸಚಿನ್‌ನನ್ನು ಬಂಧಿಸಿದ್ದಾರೆ.
 ಪತ್ನಿಯಿಂದ ದೂರು:
 ಸಚಿನ್ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಿವಾಸಿ. ಇತ್ತ ಚಿಕ್ಕೋಡಿ ಪೊಲೀಸರಿಗೆ ಸಚಿನ್‌ನಿಂದ ವಿಚ್ಛೇದನ ಪಡೆದಿರುವ ಮಾಜಿ ಪತ್ನಿ ಹರ್ಷಿತಾ ಕೂಡ ದೂರು ನೀಡಿದ್ದಾರೆ. ಸಚಿನ್‌ನಿಂದ ತನಗೆ ರಕ್ಷಣೆ ನೀಡುವಂತೆ ಹಾಗೂ ತನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಆತನೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ಮೀರಜ್‌ನ ಗಾಂಧೀ ಚೌಕ್ ಹಾಗೂ ಚಿಕ್ಕೋಡಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net