ಅಂತರ್​ಜಿಲ್ಲಾ ಕಳ್ಳನ ಬಂಧನ; 46 ಲಕ್ಷ ಮೌಲ್ಯದ ಚಿನ್ನಾಭರಣ ವಶ

udp-crime udp
Published on

ಉಡುಪಿ: ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಬಳಿಯ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ, ಅಂತರ್​ ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸಿದ್ದು, 46.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೋಲಿಸ್​ ವರಿಷ್ಠ್ಠಾಧಿಕಾರಿ ಸಿದ್ದಲಿಂಗಪ್ಪ ಎಸ್​.ಟಿ ತಿಳಿಸಿದ್ದಾರೆ.

ಬುಧವಾರ ನಗರ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಉತ್ತರಹಳ್ಳಿಯ ಮಂಜುನಾಥ್​ ಅಲಿಯಾಸ್​ ಕಲ್ಕೆರೆ ಮಂಜ(43) ಬಂಧಿತ ಆರೋಪಿ. ಅ.9 ರಂದು ಉಡುಪಿಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಬಳಿಯ ಅಮ್ಮುಂಜೆ ವಿಠ್ಠಲದಾಸ್​ ನಾಯಕ್​ ಅವರ ಮನೆಯಲ್ಲಿದ್ದ 1,882 ಗ್ರಾಂ ತೂಕದ 66,36,300 ರೂ ಮೌಲ್ಯದ ಚಿನ್ನಾಭರಣ ಹಾಗು 7,450 ಗ್ರಾಂ ತೂಕದ 6,70,500 ರೂ ಮೌಲ್ಯದ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು 73,06,800 ರೂ.ಯ ಆಭರಣಗಳು ಕಳವಾದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ವಿಶೇಷ ತಂಡ ಅ.31 ರಂದು ಉದ್ಯಾವರದ ಬಲಾಯಿಪಾದೆ ಜಂಕ್ಷನ್​ ಬಳಿ ಈಕೊ ವಾಹನ ಸಹಿತ ಈತನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಬಂಧಿತ ಆರೋಪಿಯಿಂದ 31,55,930 ರೂ. ಮೌಲ್ಯದ 530 ಗ್ರಾಂ ಚಿನ್ನಾಭರಣ, 15.12 ಲಕ್ಷ ರೂ. ಮೌಲ್ಯದ 16 ಕೆ.ಜಿ ಬೆಳ್ಳಿಯ ಆಭರಣ ವಶಕ್ಕೆ ಪಡೆಯಲಾಗಿದ್ದು, ಕಳ್ಳತನಕ್ಕೆ ಬಳಸುತ್ತಿದ್ದ 2,50,000 ರೂ. ಮೌಲ್ಯದ ಈಕೋ ವಾಹನವನ್ನು ಜಪ್ತಿ ಮಾಡಲಾಗಿದೆ. ಈತನ ವಿರುದ್ದ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 60ಕ್ಕೂ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net