

ಮೈಸೂರು: ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿ 7.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗ್ರಾಮದ ವಿಜಯನ್ ಅವರು ಜ. 5ರಂದು ಮನೆಗೆ ಬಾಗಿಲಿಗೆ ಬೀಗ ಹಾಕಿಕೊಂಡು ಪತ್ನಿಯೊಂದಿಗೆ ಮೈಸೂರಿಗೆ ಬಂದಿದ್ದರು. ಅವರ ಮಗ ಶಾಲೆಯಿಂದ ಸಂಜೆ ಮನೆಗೆ ಬಂದಾಗ ಬಾಗಿಲು ತೆರೆದುಕೊಂಡಿತ್ತು. 184 ಗ್ರಾಂ ಚಿನ್ನಾಭರಣ, 70 ಗ್ರಾಂ ಬೆಳ್ಳಿ ಪದಾರ್ಥ, ಮೊಬೈಲ್ ಸೇರಿದಂತೆ 9.65 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು.
ತನಿಖೆ ಕೈಗೊಂಡ ಅಪರ ಪೊಲೀಸ್ ಅಧೀಕ್ಷಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳವು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ.
7.30 ಲಕ್ಷ ರೂ. ಮೊತ್ತದ 99 ಗ್ರಾಂ ಚಿನ್ನಾಭರಣ, 4,700 ರೂ. ಮೌಲ್ಯದ ಬೆಳ್ಳಿ ಪದಾರ್ಥ ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯದಲ್ಲಿ ಎಎಸ್‌ಐ ಸತೀಶ್, ಸಿಬ್ಬಂದಿ ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ್ ಇದ್ದರು.