

ಕೊಳ್ಳೇಗಾಲ: ಪಟ್ಟಣದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಸಾಲ ನೀಡಿ ಅಧಿಕ ಬಡ್ಡಿ ದಂಧೆ ನಡೆಸುತ್ತಿದ್ದವನ ಮನೆ ಮೇಲೆ ಮಂಗಳವಾರ ಪಟ್ಟಣ ಪೊಲೀಸರು ದಾಳಿ ನಡೆಸಿದ್ದು ದಾಖಲೆಗಳ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಪಟ್ಟಣದ ನಾಯಕರ ದೊಡ್ಡಬೀದಿ ನಿವಾಸಿ ಮಾರಿಪುಟ್ಟ(57) ಬಂಧಿತ ಆರೋಪಿ. ಈತ ಮಟನ್ ಅಂಗಡಿ ವ್ಯಾಪಾರಿಯಾಗಿದ್ದು ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಸಾಲ ನೀಡಿ ಅಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಬಿ.ವಿ.ವರ್ಷಾ ಹಾಗೂ ಸಿಬ್ಬಂದಿ ಮಾರಿಪುಟ್ಟ ಮನೆ ಮೇಲೆ ದಾಳಿ ನಡೆಸಿದರು.
ಮನೆಯಲ್ಲಿ ಶೋಧ ನಡೆಸಿದಾಗ ಆರೋಪಿ 15,30,000 ರೂ.ಸಾಲವನ್ನು ನೀಡಿರುವುದು ಗೊತ್ತಾಗಿದೆ. ಸಾಲ ಪಡೆದವರಿಂದ ಹಣದ ಭದ್ರತೆಗಾಗಿ ಸಾರ್ವಜನಿಕರಿಂದ ಪಡೆದಿದ್ದ 5 ಗ್ರಾಂ ಚಿನ್ನದ ಉಂಗುರ, 19 ಖಾಲಿ ಚೆಕ್‌ಗಳು, 12 ಅಸಲು ಆರ್.ಸಿ. ಕಾರ್ಡ್‌ಗಳು, 3 ನಿವೇಶನ ಅಸಲಿ ದಾಖಲಾತಿಗಳು, ಎರಡು ಲೇದರ್ ಫೈಲ್‌ಗಳು ಇತ್ಯಾದಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.