ಪೈಪ್ ಕಳವು ಮಾಡಿದ್ದ ನಾಲ್ವರ ಬಂಧನ

8mlv2 (1)
Published on

ಮಳವಳ್ಳಿ: ತಾಲೂಕಿನ ಕಿರುಗಾವಲು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗೆಂದು ಶೇಖರಿಸಿಡಲಾಗಿದ್ದ ಕಬ್ಬಿಣದ ಪೈಪ್ ಹಾಗೂ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ನಿಡಘಟ್ಟ ಗ್ರಾಮದ ಶಿವನಂಜು, ಬೆಂಗಳೂರು ಮೂಲದ ಗಿರಿಧರ್, ಪ್ರಮೋದ ಹಾಗೂ ಪಾಂಡವಪುರ ತಾಲೂಕಿನ ಸೊಣಬ ಗ್ರಾಮದ ಚಲುವರಾಜು ಬಂಧಿತರು ಎಂದು ಎಸ್ಪಿ ಪರಶುರಾಮ್ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜನವರಿಯಲ್ಲಿ ಕಿರುಗಾವಲು ಬಳಿ ಶೇಖರಿಸಿಟ್ಟಿದ್ದ 106 ಕಬ್ಬಿಣದ ಪೈಪ್‌ಗಳನ್ನು ಕಳ್ಳತನ ಮಾಡಿ ತಮಿಳುನಾಡಿನ ಚೆನೈ ನಗರದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಜ.24ರಂದು ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಕ್ರೇನ್ ಮಾಲೀಕರ ಸಭೆ ಕರೆದು ಪೈಪ್ ಕಳುವಾಗಿರುವ ಸಂಬಂಧ ಸಭೆ ನಡೆಸಿದ್ದರು. ಈ ವೇಳೆ ಮಾಲೀಕರೊಬ್ಬರು, ತಮ್ಮ ಕ್ರೇನ್ ಅನ್ನು ಜನವರಿಯಲ್ಲಿ ಕಬ್ಬಿಣದ ಪೈಪ್ ಎತ್ತಲು ಬಾಡಿಗೆ ಪಡೆದಿದ್ದರು ಎಂದು ಮಾಹಿತಿ ನೀಡಿದ್ದರು. ಬಳಿಕ ಮೊಬೈಲ್ ನಂಬರ್ ಪಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪರಶುರಾಮ್ ಮಾಹಿತಿ ನೀಡಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೂರು ಲಾರಿ ಸೇರಿದಂತೆ ಪೈಪ್‌ಗಳನ್ನು ದಸ್ತಗಿರಿ ಮಾಡಲಾಯಿತು. ಬಳಿಕ ಬಂಧಿತರನ್ನು ಮಾಲು ಸಮೇತ ಪರೇಡ್ ನಡೆಸಿ, ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಎಎಸ್‌ಪಿ ಡಾ.ಶೋಭಾರಾಣಿ, ಡಿವೈಎಸ್‌ಪಿ ಪೃಥ್ವಿ ಸಲಹೆಯಂತೆ ಗ್ರಾಮಾಂತರ ಸಿಪಿಐ ಧರ್ಮೇಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಪುರುಷೋತ್ತಮ್, ಸಿಬ್ಬಂದಿ ಪ್ರಭುಸ್ವಾಮಿ, ರಿಯಾಜ್, ಅನೀಫ್, ಮಹಮದ್ ಫಾರುಕ್, ಪ್ರೇಮ್ ಕುಮಾರ್, ರಾಜು, ರವಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net