ನಾಲ್ವರು ಬೈಕ್ ಕಳವು ಆರೋಪಿಗಳ ಬಂಧನ

19mdkm1
Published on

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ತಿಳಿಸಿದರು.

ಜಿಲ್ಲಾಸ್ಪತ್ರೆ ಆವರಣದಲ್ಲಿ ಆಸ್ಪತ್ರೆ ಸಿಬ್ಬಂದಿ ನಿಲ್ಲಿಸಿದ್ದ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರ್ ಬೈಕ್ ಮೇ 16ರಂದು ಕಳ್ಳತನ ಮಾಡಿದ್ದ ಪ್ರಕರಣ ಮೇ 16ರಂದು ಮಡಿಕೇರಿ ನಗರ ಠಾಣೆಯಲ್ಲಿ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ವೇಳೆ ಆರೋಪಿಗಳು ಪತ್ತೆಯಾಗಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೂರ್ನಾಡಿನ ಕೆ.ಬಿ.ಅರುಣ (40), 2ನೇ ಮೊಣ್ಣಂಗೇರಿಯ ಎಂ.ಸಚಿನ್ (21), ಮೂರ್ನಾಡಿನ ಕೀರ್ತಿ ಕಾರ್ತಿಕ್ (20), ಐಕೊಳದ ಕೆ.ಆರ್.ವಾಸು ಬಂಧಿತ ಆರೋಪಿಗಳು. ಅರುಣ, ಕೀರ್ತಿ ಕೂಲಿ ಕಾರ್ಮಿಕರಾಗಿದ್ದು, ಸಚಿನ್, ವಾಸು ಕಂಡಕ್ಟರ್ ಆಗಿದ್ದಾರೆ. ಆರೋಪಿಗಳು ಕಳ್ಳತನ ಮಾಡಿದ್ದ 5 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿರಾಜಪೇಟೆ ತಾಲೂಕು ವ್ಯಾಪ್ತಿಯ ಕಡಂಗದಲ್ಲಿ ಕಾಫಿ ತೋಟದಲ್ಲಿ ಮಾಲೀಕರ ಮನೆಯಿಂದ ಕಳ್ಳತನ ಮಾಡಿದ್ದ ಒಂದು ರಿವಾಲ್ವಾರ್ ವಶಪಡಿಸಿಕೊಳ್ಳಲಾಗಿದೆ. ಮಾಲೀಕರು ಮನೆಯಲ್ಲಿ ಇಲ್ಲದ ವೇಳೆ ತೋಟ ಕೆಲಸಕ್ಕೆ ಹೋಗಿದ್ದು, ಆ ವೇಳೆ ಕಳ್ಳತನ ಮಾಡಿದ್ದಾರೆಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಮಡಿಕೇರಿ ನಗರ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಎಂ.ಟಿ.ಅಂತಿಮ, ಎಎಸ್‌ಐ ಕೆ.ಜಿ. ಹೊನ್ನಪ್ಪ, ಸಿಬ್ಬಂದಿ ಕಿರಣ್, ಸಿ.ಯು. ಚರ್ಮಣ, ಕೆ.ಕೆ.ದಿನೇಶ್, ಶ್ರೀನಿವಾಸ, ಬಿ.ಕೆ.ಪ್ರವೀಣ್, ನಾಗರಾಜ್ ಕಡಗನ್ನವರ್, ಬಿ.ಜಿ.ಅರುಣ್‌ಕುಮಾರ್, ಕೆ.ಎ.ಉತ್ತಪ್ಪ, ಬಿ.ಒ.ಸುನೀಲ್, ನಂದಕುಮಾರ್, ಸಿ.ಓಮನ, ಭವಾನಿ, ಸೌಮ್ಯಾ, ಸಿ.ಕೆ. ರಾಜೇಶ್, ಗಿರೀಶ್ ಪಾಲ್ಗೊಂಡಿದ್ದರು.

ಒಂದೂವರೆ ವರ್ಷದಿಂದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದು, ಅವರನ್ನು ಮತ್ತಷ್ಟು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದರು. ಡಿವೈಎಸ್ಪಿ ಬಿ.ಪಿ.ದಿನೇಶ್‌ಕುಮಾರ್, ಸಿಐ ಅನೂಪ್ ಮಾದಪ್ಪ, ಎಸ್‌ಐ ಎಂ.ಟಿ. ಅಂತಿಮ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net