

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ದ್ವಿಚಕ್ರ ವಾಹನ ಕಳವು ಪ್ರಕರಣ ಭೇದಿಸಿರುವ ನಗರ ಠಾಣೆ ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸಿ, 24 ದ್ವಿಚಕ್ರ ವಾಹನ ಹಾಗೂ 11 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಇಸ್ಲಾಂಪುರದ ನಿವಾಸಿಗಳಾದ ರಿಜ್ವಾನ್(23), ಅಲ್ತಮಷ್ ಶರೀಫ್(24), ನಗರದ ಸುಭಾಷ್ ನಗರದ ನಿವಾಸಿಗಳಾದ ನಂದನ್(20), ಹರ್ಷಿತ್(24), ವಾಜರಹಳ್ಳಿ ನಿವಾಸಿ ಮಹಮದ್ ಸೂಫಿಯಾನ್(21) ಬಂಧಿತರು.
ಸೆ.11ರಂದು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಶಿಣಕುಂಟೆ ಬಳಿಯ ಆದರ್ಶನಗರ ಸಮೀಪ ಆರೋಪಿಗಳು ಮಾರಕಾಸ್ತ್ರ ಹಿಡಿದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ವೇಳೆ, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಶಶಿಧರ್ ನೇತೃತ್ವದ ಸಿಬ್ಬಂದಿ ದಾಳಿ 5 ಮಂದಿಯನ್ನು ವಶಪಡಿಸಿಕೊಂಡಿದ್ದರು. ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಬುಧವಾರ ನಗರ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಆರೋಪಿಗಳನ್ನು ವಿಚಾರ ನಡೆಸಿದಾಗ ಸುಮಾರು 24 ವಿಧದ ಕಂಪನಿ ದ್ವಿಚಕ್ರ ವಾಹನಗಳು ಹಾಗೂ 11 ಮೊಬೈಲ್ ಕದ್ದಿರುವ ಬಗ್ಗೆ ಒಪ್ಪಿಕೊಂಡಿದ್ದು, ಎಲ್ಲ ಬೈಕ್ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಐಷರಾಮಿ ಜೀವನಕ್ಕೆ ಕಳ್ಳತನ ಆರೋಪಿಗಳು ವಿವಿಧ ಸ್ಥಳದಲ್ಲಿ ಬೈಕ್ ಕಳವು ಮಾಡಿದ್ದು, ದ್ವಿಚಕ್ರವಾಹನಗಳನ್ನು ಗ್ರಾಮೀಣ ಭಾಗದ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದಾರೆ. ವಾಹನಗಳ ದಾಖಲೆಗಳನ್ನು ಬಳಿಕ ತಂದುಕೊಡುವುದಾಗಿ ತಿಳಿಸಿ ಮಾರಾಟ ಪ್ರಕ್ರಿಯೆ ನಡೆಸುತ್ತಿದ್ದರು. ಐಷರಾಮಿ ಜೀವನ ನಡೆಸಲು ಆರೋಪಿಗಳು ಕಳ್ಳತನ ಮಾಡುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎಸ್‌ಪಿ ತಿಳಿಸಿದರು.
5 ಮಂದಿ ಆರೋಪಿಗಳು ಸ್ನೇಹಿತರಾಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ತುಮಕೂರು, ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳತನ, ದರೋಡೆ, ಮಾದಕ ವಸ್ತು ಮಾರಾಟ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಬಾಲದಂಡಿ ತಿಳಿಸಿದರು.