

ಮೈಸೂರು: ಸಂಯುಕ್ತ ಕಿಸಾನ್ ಮೋರ್ಚಾದಿಂದ ಫೆ.13ರಂದು ನಡೆಯಲಿರುವ ದೆಹಲಿ ಚಲೋ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜ್ಯದಿಂದ ತೆರಳಿದ್ದ 250 ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿರುವುದನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗನ್‌ಹೌಸ್ ಸಮೀಪದ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಜಮಾವಣೆಗೊಂಡ ರೈತರು, ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಯಿತು. ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಸ್ಥಳಕ್ಕೆ ಬಂದ ಪೋಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ರೈತರು ರಸ್ತೆ ಬದಿಯಲ್ಲಿ ಕೆಲ ಹೊತ್ತು ಪ್ರತಿಭಟಿಸಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಹೋರಾಟ ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಮಧ್ಯಪ್ರದೇಶ ಪೊಲೀಸರು ರೈತರ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರು ಸಾಲ ಮನ್ನಾ ಮಾಡುವಂತೆ ಒತ್ತಾಯಿಸುವುದು ತಪ್ಪೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಕೇಳುವುದು ಅಪರಾಧವೇ? ಎಂದು ಕಿಡಿಕಾರಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಭೂಪಾಲ್ ರೈಲು ನಿಲ್ದಾಣದಲ್ಲಿ ರೈತರನ್ನು ತಡೆದು ಸಮುದಾಯ ಭವನಗಳಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. ಕೇವಲ ಭಾಷಣದಲ್ಲಿ ರೈತರ ಬಗ್ಗೆ ಕರುಣೆ ವ್ಯಕ್ತಪಡಿಸುವ ಮೋದಿ ಅವರು, ರೈತ ವಿರೋಧಿ ನಡೆ ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಕ್ರಮವಾಗಿ ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅವರನ್ನು ಹೋರಾಟದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಬೇಕು. ಇಲ್ಲದಿದ್ದರೆ ನಿತ್ಯವೂ ವಿಭಿನ್ನವಾಗಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘದ ಮುಖಂಡರಾದ ಸಾತಗಳ್ಳಿ ಬಸವರಾಜ್, ಕಿರಗಸೂರು ಶಂಕರ್, ಕಾಟೂರು ಮಹದೇವಸ್ವಾಮಿ, ನೀಲಕಂಠಪ್ಪ ಮಾರ್ಬಳ್ಳಿ, ಮಹದೇವಪ್ಪ ಹೀರನಂದಿ, ನಾಗೇಶ್ ವರಕೋಡು, ಗಿರೀಶ್, ಶ್ರೀಕಂಠ, ಮಹೇಶ್, ಅರವಿಂದ ಇನ್ನಿತರರಿದ್ದರು.