ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದ್ದ ಐಷಾರಾಮಿ ಕಾರು ಚಾಲಕನ ಬಂಧನ

ACCIDENT
Published on

ಬೆಂಗಳೂರು: ಅಜಾಗರೂತೆಯಿಂದ ಕಾರು ಚಲಾಯಿಸಿ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಐಷಾರಾಮಿ ಕಾರು ಚಾಲಕನನ್ನು ಕಬ್ಬನ್​ಪಾರ್ಕ್ ಸಂಚಾರ ಠಾಣೆ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಉದ್ಯಮಿಯೊಬ್ಬರ ಪುತ್ರ ಸನ್ನಿ ಸಬರ್​ವಾಲ್ ಬಂಧಿತ. ಭಾನುವಾರ (ಫೆ.9) ಸಂಜೆ 5 ಗಂಟೆಗೆ ಕ್ವೀನ್ಸ್ ರಸ್ತೆ ಕಡೆಯಿಂದ ಅತಿವೇಗವಾಗಿ ಲ್ಯಾಂಬೋರ್ಗಿನಿ ಕಾರು ಚಲಾಯಿಸಿಕೊಂಡು ಬಂದಿದ್ದ ಈತ ನಿಯಂತ್ರಣ ತಪ್ಪಿ ಸಿಟಿಒ ವೃತ್ತದಲ್ಲಿನ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದ. ಬಳಿಕ ಜಖಂಗೊಂಡ ಪೊಲೀಸ್ ಚೌಕಿಯೊಂದಿಗೆ ಸೆಲ್ಪಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.

ಪ್ರಕರಣ ದಾಖಲಿಸಿಕೊಂಡಿದ್ದ ಕಬ್ಬನ್​ಪಾರ್ಕ್ ಸಂಚಾರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಅಪಘಾತದ ಬಳಿಕ ಸನ್ನಿ ಟ್ಯಾಕ್ಸಿಯೊಂದರಲ್ಲಿ ಪರಾರಿಯಾಗಿದ್ದ. ಸಿಸಿ ಕ್ಯಾಮರಾದ ದೃಶ್ಯಗಳನ್ನು ಆಧರಿಸಿ ಭಾನುವಾರ ರಾತ್ರಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ರೇಸ್ ಮಾದರಿಯಲ್ಲಿ ಕಾರು ಚಲಾಯಿಸಿದ್ದ. ಇದರ ಪರಿಣಾಮ ಅಪಘಾತವಾಗಿತ್ತು. ಆರೋಪಿಯ ಚಾಲನಾ ಪರವಾನಗಿ (ಡಿಎಲ್) ರದ್ದುಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಂಟಿ ಆಯುಕ್ತರಿಂದ ಎಚ್ಚರಿಕೆ: ಐಷಾರಾಮಿ ಕಾರು ಚಾಲಕರು ಅಪಘಾತ ಎಸಗಿದ ಎರಡು ಪ್ರತ್ಯೇಕ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ. ರವೀಕಾಂತೇಗೌಡ ಹೇಳಿದ್ದಾರೆ.

ಶ್ರೀಮಂತರಾದರೆ ಖಾಸಗಿ ಜಾಗದಲ್ಲಿ ರಸ್ತೆಗಳನ್ನು ನಿರ್ವಿುಸಿಕೊಂಡು, ರೇಸ್ ಮಾಡಿಕೊಳ್ಳಲಿ. ಅದೆಲ್ಲ ಬಿಟ್ಟು ಸಾರ್ವಜನಿಕ ರಸ್ತೆಗಳಲ್ಲಿ ಜನರಿಗೆ ತೊಂದರೆ ಉಂಟು ಮಾಡಿದರೆ ಸುಮ್ಮನಿರುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೇಖ್ರಿ ವೃತ್ತದ ಬಳಿ ಆಟೋ ಮತ್ತು ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಬೆಂಟ್ಲಿ ಕಾರು ಚಾಲಕನ ಸುಳಿವು ಸಿಕ್ಕಿದೆ. ಸಿಸಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ. ಶ್ರೀಮಂತ ಹಾಗೂ ಬಡವರಿಗೆಂದು ಪ್ರತ್ಯೇಕ ಕಾನೂನುಗಳಿಲ್ಲ. ಸಾರ್ವಜನಿಕ ರಸ್ತೆಗಳಿಗೆ ವಾಹನ ಇಳಿಸುವ ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸಬೇಕು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net