ಗಾಂಜಾ ಮಾರುತ್ತಿದ್ದ ಆರೋಪಿಗಳ ಬಂಧನ

10ark4
ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳೊಂದಿಗೆ ಕೊಣನೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಗಿರೀಶ್, ಪ್ರಹ್ಲಾದ್, ಪೇದೆಗಳಾದ ಅಭಿಷೇಕ್, ಇರ್ಫಾನ್ ಷರೀಫ್, ಪರಮೇಶ್ ಸೂರ್ಯ, ಗಿರೀಶ್, ಮಹೇಶ್ ಚಿತ್ರದಲ್ಲಿದ್ದಾರೆ.
Published on

ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣನೂರು ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಕಂದಮಾಲ್ ಜಿಲ್ಲೆಯ ಟಾಟಾ ಮಹಾ ಮಂಡಕಿಯಾ ಗ್ರಾಮದ ಸಮೀರ್ ಪ್ರಧಾನ್ (47), ಬಗಾಡಿ ಗ್ರಾಮದ ಗೀತಾ ಪ್ರಧಾನ್ (25) ಬಂಧಿತರು. ಆರೋಪಿಗಳು ಭಾನುವಾರ ರಾಮನಾಥಪುರ ಐಬಿ ಸರ್ಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳಿಂದ 10 ಕೆಜಿ 600 ಗ್ರಾಂ ಒಣಗಿರುವ ಕಡ್ಡಿ, ಹೂವು, ಮೊಗ್ಗು, ಬೀಜ, ಸೊಪ್ಪು ಮಿಶ್ರಿತ ಗಾಂಜಾ ವಶಕ್ಕೆ ಪಡೆಯಲಾಗಿದೆ. ಒಡಿಶಾದಿಂದ ಕರ್ನಾಟಕಕ್ಕೆ ರೈಲಿನಲ್ಲಿ ಬರುವಾಗ ಅಪರಿಚಿತರು ಭೇಟಿಯಾಗಿ ಕರ್ನಾಟಕದಲ್ಲಿ ಗಾಂಜಾ ಸೊಪ್ಪಿಗೆ ಅಪಾರ ಬೇಡಿಕೆ ಇದ್ದು ಮಾರಾಟ ಮಾಡುವಂತೆ ಹೇಳಿ 25 ಸಾವಿರ ರೂ. ಪಡೆದು 10 ಕೆಜಿ ಗಾಂಜಾ ನೀಡಿದ್ದರು. ಹಾಸನ ಜಿಲ್ಲೆಯ ವಿವಿಧ ಭಾಗದಲ್ಲಿ ಒಡಿಶಾದ ಕೂಲಿ ಕಾರ್ಮಿಕರಿದ್ದು ಅವರಿಗೆಲ್ಲ ಗಾಂಜಾ ಸೇವನೆ ಮಾಡಿಸುವ ಸಲುವಾಗಿ ತಂದು ಮಾರಾಟ ಮಾಡುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಸಬ್ ಇನ್ಸ್‌ಪೆಕ್ಟರ್ ಗಿರೀಶ್ ತಿಳಿಸಿದ್ದಾರೆ.

ಈ ಕುರಿತು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net