ವೃದ್ಧೆಯ ಸರ ಅಪಹರಿಸಿ ಪರಾರಿಯಾಗಿದ್ದ ಯುವಕನ ಬಂಧನ

1HSN3 chandan
Published on

ಹಾಸನ: ತಾಲೂಕಿನ ಶಂಖದಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಸಂಜೆ ದನ ಮೇಯಿಸುತ್ತಿದ್ದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಚಿನ್ನದ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಖಾಸಗಿ ಕಾಲೇಜೋಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಚಂದನ್ (18) ಬಂಧಿತ ಆರೋಪಿ. ಆತನ ಹಲ್ಲೆಯಿಂದ ತಲೆಗೆ ಗಂಭೀರ ಗಾಯವಾಗಿರುವ ಶಾರದಮ್ಮ (65) ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಮಂಗಳವಾರ ಸಂಜೆ ಹೊಲದಲ್ಲಿ ದನ ಮೇಯಿಸುತ್ತಿದ್ದ ಶಾರದಮ್ಮ ಅವರ ಹಿಂಬದಿಯಿಂದ ಬಂದ ಆರೋಪಿ ಕೊರಳಿನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದ. ಅದಕ್ಕೆ ಅವರು ತೀವ್ರ ಪ್ರತಿರೋಧ ಒಡ್ಡಿದ್ದರು. ಇದರಿಂದ ಆತಂಕಿತನಾದ ಆತ ಅಲ್ಲೆ ಬಿದ್ದಿದ್ದ ಮರದ ಪಟ್ಟಿಯೊಂದರಿಂದ ಅವರ ತಲೆಗೆ ಹಲ್ಲೆ ನಡೆಸಿ ಮತ್ತೊಮ್ಮೆ ಸರ ಕಸಿಯಲು ಯತ್ನಿಸಿದ. ಆಗ ಸರದ ಅರ್ಧ ಭಾಗ ಮಾತ್ರವೇ ಆತನ ಕೈ ಸೇರಿತ್ತು. ಅಷ್ಟರಲ್ಲಿ ಸುತ್ತಮುತ್ತಲಿನ ಹೊಲದಲ್ಲಿದ್ದ ಕೆಲವರು ಆತನ ಕೃತ್ಯ ಕಂಡು ಅತ್ತ ಬಂದಿದ್ದರಿಂದ ಅಲ್ಲಿಂದ ಪರಾರಿಯಾಗಿದ್ದ.

ವಿಷಯ ತಿಳಿದು ಗ್ರಾಮಾಂತರ ಠಾಣೆ ಪೊಲೀಸರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆಗ ಘಟನಾ ಸ್ಥಳದ ಸಮೀಪದಲ್ಲಿ ವಾರಸುದಾರರಿಲ್ಲದ ಬೈಕ್ ಒಂದು ಪತ್ತೆಯಾಗಿತ್ತು. ಅದರ ಆರ್‌ಟಿಒ ದಾಖಲಾತಿಗಳನ್ನು ಪರಿಶೀಲಿಸಿದಾಗ ಅದು ಚಿಕ್ಕಕೊಂಡಗೊಳ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನುವುದು ಖಚಿತವಾಯಿತು.

ಬೈಕ್ ಮಾಲೀಕರ ಮನೆಗೆ ಹೋಗಿ ವಿಚಾರಿಸಿದಾಗ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅವರ ಪುತ್ರ ಬೈಕ್‌ನಲ್ಲಿ ಹೋಗಿದ್ದು, ಮನೆಗೆ ಹಿಂದಿರುಗಿಲ್ಲ ಎಂದು ತಿಳಿಸಿದ್ದರು. ಸರ ಕಳವು ಮಾಡಿ ಓಡಿ ಹೋಗಿದ್ದ ಆರೋಪಿ ಜನಸಂದಣಿ ಕರಗಿದ ನಂತರ ಹೊಲದಲ್ಲಿ ಮುಖ್ಯ ರಸ್ತೆಯತ್ತ ನಡೆದು ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದರು.

ಸಾಲ ತೀರಿಸಲು ಕಳ್ಳನಾದ ಯುವಕ: 18 ವರ್ಷ ವಯೋಮಾನಕ್ಕೆ ಕಾಲಿಟ್ಟು ಕೇವಲ 2 ತಿಂಗಳು ಕಳೆದಿರುವ ಆರೋಪಿ ಚಂದನ್, ಸ್ನೇಹಿತನೊಬ್ಬನ ಬಳಿ 11 ಸಾವಿರ ರೂ. ಸಾಲ ಪಡೆದಿದ್ದ. ಅದನ್ನು ಅನಗತ್ಯ ವಿಷಯಗಳಿಗಾಗಿ ಖರ್ಚು ಮಾಡಿದ್ದ. ಆದಾಯದ ಮೂಲವಿಲ್ಲದ್ದರಿಂದ ಅದನ್ನು ಮರುಪಾವತಿಸಲು ಆಗಿರಲಿಲ್ಲ. ಸಾಲ ಕೊಟ್ಟಿದ್ದಾತ ಈ ವಿಷಯವನ್ನು ಆತನ ತಂದೆಗೆ ತಿಳಿಸುವುದಾಗಿ ಬೆದರಿಸುತ್ತಿದ್ದ. ಇದರಿಂದ ಕಂಗಾಲಾಗಿದ್ದ ಆತ ಗೆಳೆಯನೊಬ್ಬನ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಒಂಟಿ ವೃದ್ಧೆಯನ್ನು ಕಂಡು ಸರಗಳವಿನ ಆಲೋಚನೆ ಮಾಡಿದ. ತನ್ನ ಯೋಜನೆಯನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದು ಸರ ಎಗರಿಸುವ ಭರದಲ್ಲಿ ವೃದ್ಧೆಯ ಮೇಲೆ ಗಂಭೀರ ಹಲ್ಲೆಯನ್ನೂ ನಡೆಸಿದ್ದ. ಆದರೆ ಸಿಕ್ಕಿಬೀಳುವ ಭೀತಿಯಲ್ಲಿ ಬೈಕ್ ಬಿಟ್ಟು ಕಾಲಿಗೆ ಬುದ್ಧಿ ಹೇಳಿದ್ದ. ಆರೋಪಿಯ ವಿರುದ್ಧ ಈಗ ಸರಗಳವು, ಕೊಲೆಯತ್ನ ಪ್ರಕರಣಗಳು ದಾಖಲಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net