ಪ್ರೀತಿಸುವಂತೆ ಕಿರುಕುಳ ಕೊಡುತ್ತಿದ್ದವನ ಬಂಧನ

HARISHA
ಹರೀಶ
Published on

ಹನೂರು: ಪ್ರೀತಿಸುವಂತೆ 13 ವರ್ಷದ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಗುರುವಾರ ಹನೂರು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದ ಹರೀಶ ಆಲಿಯಾಸ್ ಕರಿಮಲ್ಲ (20) ಬಂಧಿತ ಆರೋಪಿ.

ಪಟ್ಟಣದ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿರುವ ಅಪ್ರಾಪ್ತೆಯನ್ನು ಒಂದು ವರ್ಷದಿಂದ ಆರೋಪಿ ಹಿಂಬಾಲಿಸಿ ಪ್ರೀತಿಸಲು ಪೀಡಿಸುತ್ತಿದ್ದ. ಜತೆಗೆ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಳ್ಳುವುದು, ಬೈಕ್ ಹತ್ತುವಂತೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೂರ‌್ನಾಲ್ಕು ಬಾರಿ ಹನೂರು ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರು ನೀಡಲಾಗಿತ್ತು.

ಜತೆಗೆ ಬಾಲಕಿ ಶಾಲೆಯಲ್ಲಿನ ಆಪ್ತ ಗೆಳತಿ ಪೆಟ್ಟಿಗೆಯಲ್ಲಿ ಈ ಬಗ್ಗೆ ಬರೆದು ಹಾಕಿದ್ದಳು. ಮಕ್ಕಳ ಸಹಾಯವಾಣಿಗೂ ಕರೆ ಮಾಡಿ ದೂರು ನೀಡಿದ್ದಳು. ಆದರೆ ಯಾವುದೇ ಕ್ರಮವಾಗಿಲ್ಲ. ಹಾಗಾಗಿ ಮಗಳಿಗೆ ರಕ್ಷಣೆ ನೀಡುವುದರ ಜತೆಗೆ ಕಿರುಕುಳ ನೀಡುತ್ತಿರುವ ಯುವಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಪ್ರಾಪ್ತೆಯ ತಾಯಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net