

ಮೈಸೂರು: ಮನೆಗಳಲ್ಲಿ ಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಶೋಕಪುರಂ ಠಾಣಾ ಪೊಲೀಸರು ಬಂಧಿಸಿದ್ದಾರೆ.
18,16,500 ರೂ. ಮೌಲ್ಯದ 305 ಗ್ರಾಂ ಚಿನ್ನದ ಆಭರಣ ಹಾಗೂ 1200 ಗ್ರಾಂ ತೂಕದ ಬೆಳ್ಳಿಯ ಪದಾರ್ಥ ಹಾಗೂ ಕೃತ್ಯಕ್ಕೆ ಬಳಸಿದ ಕಾರು, ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿದ್ದ ವಿಶೇಷ ತಂಡ ಸೆ.27ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ವಿಚಾರಣೆ ನಡೆಸಿದೆ. ಈ ವೇಳೆ ತಾನು ತಲೆಮರೆಸಿಕೊಂಡಿರುವ ಇಬ್ಬರ ಜತೆಗೂಡಿ ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಕಳ್ಳತನ ಮತ್ತು ಸರಗಳ್ಳತನ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.
ಈ ಪತ್ತೆ ಕಾರ್ಯದಿಂದ ಅಶೋಕಪುರಂ, ಸರಸ್ವತಿಪುರಂ, ಆಲನಹಳ್ಳಿ, ಮೇಟಗಳ್ಳಿ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಅನೇಕ ಮನೆಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.