ಮತಾಂತರಕ್ಕೆ ಯತ್ನಿಸುತ್ತಿದ್ದ 6 ಜನರ ಬಂಧನ

arrest
Published on

ಶಿರಸಿ: ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂಬ ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ ಘಟನೆ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಚಲಿಂಗ ಬಳಿಯ ಜಗಳೆಮನೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಹಾವೇರಿ ಜಿಲ್ಲೆ ಬಾಳೆಹಳ್ಳಿಯ ಪರಮೇಶ್ವರ ಚಂದ್ರಪ್ಪ ಭೀಮನಾಯ್ಕ (38), ಪತ್ನಿ ಸುನೀತಾ ಪರಮೇಶ್ವರ ಭೀಮನಾಯ್ಕ (29), ಹಾವೇರಿ ನೆಹರುನಗರದ ಧನಂಜಯ ಶಿವಣ್ಣ (32), ಶಾಲಿನಿ ರಾಣೆ (29), ಮುಂಡಗೋಡ ತಾಲೂಕು ಕ್ಯಾದಗಿಕೊಪ್ಪದ ಕುಮಾರ ಶಂಕರಪ್ಪ ಲಮಾಣಿ (31) ಹಾಗೂ ತಾರಾ ಕುಮಾರ ಲಮಾಣಿ (24) ಬಂಧಿತ ಆರೋಪಿಗಳು.

ಇವರು ಜಗಳೇಮನೆಯ ಅಡಕೆ ಮರದ ಕೆಲಸ ಮಾಡುವ ಆದರ್ಶ ಶಾಂತಾರಾಮ ನಾಯ್ಕ ಹಾಗೂ ಅವರ ಪತ್ನಿಯನ್ನು ಕ್ರೈಸ್ತ ಮತಕ್ಕೆ ಪರಿವರ್ತಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳಲ್ಲಿ ಕೆಲವರು ಈಗಾಗಲೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಪರಿಚಯದ ಆದರ್ಶ ಕುಟುಂಬಕ್ಕೆ ಕ್ರೈಸ್ತ ಧರ್ಮ ಸ್ವೀಕರಿಸುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಸ್ಥಳೀಯರ ಅಸಮಾಧಾನ

ಮತಾಂತರ ಬಗ್ಗೆ ಅನುಮಾನ ಹೊಂದಿದ್ದ ಸ್ಥಳೀಯರು, ಸೋಮವಾರ ತಡ ರಾತ್ರಿ ಗ್ರಾಮಕ್ಕೆ ಹೊರಗಿನವರು ಬಂದಿದ್ದರಿಂದ ವಿಚಾರಣೆ ನಡೆಸಿದ್ದಾರೆ. ಸ್ಪಷ್ಟ ಉತ್ತರ ನೀಡದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net