ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 10 ಆರೋಪಿಗಳ ಬಂಧನ

Published on

ಪಾಂಡವಪುರ: ಪಟ್ಟಣದ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ನಡೆಯುತ್ತಿದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹಾಗೂ ದೇವೇಗೌಡನಕೊಪ್ಪಲಿನ ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸರು ಮತ್ತೆ 10 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ ನಡೆದ ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹಾಗೂ ದೇವೇಗೌಡನಕೊಪ್ಪಲು ಭ್ರೂಣಹತ್ಯೆ ಎರಡೂ ಪ್ರಕರಣಗಳಿಂದ ಒಟ್ಟು 31 ಆರೋಪಿಗಳ ಪೈಕಿ ಈವರೆಗೆ 27 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಆರೋಗ್ಯ ಇಲಾಖೆಯ ವಸತಿಗೃಹದಲ್ಲಿ ನಡೆದ ಭ್ರೂಣಹತ್ಯೆ ಪ್ರಕರಣದಲ್ಲಿ ಒಟ್ಟು 24 ಆರೋಪಿಗಳಿದ್ದು, ಈ ಪೈಕಿ 23 ಆರೋಪಿಗಳನ್ನು ಬಂಧಿಸಲಾಗಿದೆ, ಈ ಪ್ರಕರಣದಲ್ಲಿ ಒಬ್ಬ ತಲೆಮರೆಸಿಕೊಂಡಿದ್ದಾನೆ. ದೇವೇಗೌಡನಕೊಪ್ಪಲು ಭ್ರೂಣಹತ್ಯೆ ಪ್ರಕರಣದಲ್ಲಿ ಒಟ್ಟು 7 ಆರೋಪಿಗಳಿದ್ದು ಈ ಪೈಕಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ, ಉಳಿದ ಮೂವರು ತಲೆಮರೆಸಿಕೊಂಡಿದ್ದಾರೆ.

ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಸತ್ಯ ಆಲಿಯಾಸ್ ಲ್ಯಾಬ್ ಸತೀಶ, ಮದ್ದೂರು ತಾಲೂಕಿನ ಹುಣ್ಣನದೊಡ್ಡಿಯ ಕುಮಾರ, ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣದ ದಾಸೇಗೌಡ, ಪತ್ನಿ ಶಾರದಮ್ಮ, ಕೆ.ಆರ್.ನಗರ ತಾಲೂಕಿನ ದೊಡ್ಡೇಗೌಡನಕೊಪ್ಪಲಿನ ಪುಟ್ಟರಾಜು, ಪಾಂಡವಪುರ ತಾಲೂಕಿನ ಬುಗದ ಕಾಳೇನಹಳ್ಳಿ ಮಲ್ಲಿಕಾರ್ಜುನ, ಚಿನಕುರಳಿಯ ರತ್ನಮ್ಮ, ನಾರಾಯಣಪುರದ ಮೀನಾ, ಮೈಸೂರಿನ ಶ್ರೀರಾಂಪುರದ ಸೋಮಶೇಖರ, ಬೆಂಗಳೂರಿನ ರಾಜಾಜಿನಗರ ಪಾರ್ವತಿ ಎಂಬ ಆರೋಪಿಗಳನ್ನು ಬಂಧಿಸಿ ಗುರುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಧೀಶೆ ಬಿ.ಪಾರ್ವತಮ್ಮ ಅವರು ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net