ಐವಾನ್ ಡಿಸೋಜ ಅವರನ್ನು ಬಂಧಿಸಿ: ಈಶ್ವರಪ್ಪ ಆಗ್ರಹ

K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಬಾಂಗ್ಲಾದೇಶದಲ್ಲಿ ಆದಂತೆ ಕರ್ನಾಟಕದಲ್ಲೂ ದಂಗೆ ಎಬ್ಬಿಸುವುದಾಗಿ ನಾಲಿಗೆ ಹರಿಬಿಟ್ಟಿರುವ ಎಂಎಲ್‌ಸಿ ಐವಾನ್ ಡಿಸೋಜ ಮೇಲೆ ಸುಮೋಟೊ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ರಾಜ್ಯಪಾಲರನ್ನು ಟೀಕಿಸುವ ಭರದಲ್ಲಿ ದಂಗೆ ಎಬ್ಬಿಸುವುದಾಗಿ ಹೇಳಿದ್ದು, ಅವರ ಹೇಳಿಕೆಯನ್ನು ಎಐಸಿಸಿ ನಾಯಕ ರಾಹುಲ್ ಗಾಂಧಿ ಸಹಿತ ಯಾರೊಬ್ಬರೂ ಖಂಡಿಸದಿರುವುದು ದುರ್ದೈವ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಐವಾನ್ ಡಿಸೋಜ ಕಾಂಗ್ರೆಸ್‌ನಲ್ಲಿರಲು ಯೋಗ್ಯನಾ ಎಂಬುದನ್ನು ಅವರ ಪಕ್ಷದವರೇ ತೀರ್ಮಾನಿಸಬೇಕು. ಬಾಂಗ್ಲಾದಲ್ಲಿ ಕ್ರಿಶ್ಚಿಯನ್, ಬೌದ್ಧ, ಹಿಂದು, ಸಿಖ್ ಸೇರಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ, ಹಿಂಸೆ ಮಾಡಲಾಗಿದೆ. ಇಂತಹ ಕೃತ್ಯವನ್ನು ಭಾರತದಲ್ಲಿ ಮಾಡಲಾಗುವುದೆಂದು ಹೇಳಿರುವ ಐವಾನ್ ಡಿಸೋಜ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು. ಅವರ ಹೇಳಿಕೆ ಬೆಂಬಲಿಸುವ ಎಲ್ಲರನ್ನೂ ದೇಶದ್ರೋಹ ಆರೋಪದ ಮೇಲೆ ಕೇಸ್ ದಾಖಲಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net