

ಕೊಪ್ಪಳ: ಪಿಎಫ್ಐ ಜಿಲ್ಲಾಧ್ಯಕ್ಷನ ಬಂಧನ ಬೆನ್ನಲ್ಲೇ ಗಂಗಾವತಿಯ ಮೈಬೂಬ್ ನಗರ ನಿವಾಸಿ ಶಬ್ಬೀರ್ ಎಂಬಾತನನ್ನು ಶಿವಮೊಗ್ಗ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದು, ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ನಿಷೇಧಿತ ಐಎಸ್ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಬಂಧಿಯಾಗಿರುವ ಶಿವಮೊಗ್ಗ ಆರೋಪಿಗಳೊಂದಿಗೆ ಶಬ್ಬೀರ್ ನಂಟು ಹೊಂದಿದ್ದನೆನ್ನಲಾಗಿದೆ. ಆರೋಪಿಗಳೊಂದಿಗೆ ಶಬ್ಬೀರ್ ಮಾತುಕತೆ ನಡೆಸಿರುವ ದಾಖಲೆ ದೊರೆತಿವೆ. ತುಂಗೆ ದಡದಲ್ಲಿ ಬಾಂಬ್ ಸ್ಫೋಟ ಪ್ರಯೋಗ ನಡೆಸಿದ್ದ ಯುವಕರ ಮೊಬೈಲ್‌ನಲ್ಲಿ ಶಬ್ಬೀರ್ ಮಾತನಾಡಿದ ಕರೆ ದಾಖಲೆಗಳು ಪತ್ತೆಯಾಗಿವೆ. ಇದೇ ಕಾರಣಕ್ಕೆ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಳೆ ಹಣ್ಣಿನ ವ್ಯಾಪಾರಿಯಾಗಿರುವ ಶಬ್ಬೀರ್ ಗಂಗಾವತಿಯ ಮೈಬೂಬ್ ನಗರದಲ್ಲಿ ವಾಸವಿದ್ದ. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಭಾನುವಾರ ಬಂಧಿಸಿ ಕರೆದೊಯ್ದಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದಷ್ಟೇ ಕಾಯಗೊಂಡನಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಫ್ಐ ಕೊಪ್ಪಳ ಜಿಲ್ಲಾಧ್ಯಕ್ಷ ಮೊಹಮದ್ ಫಯಾಜ್ ನನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ಶಬ್ಬೀರ್ ಬಂಧನವಾಗಿರುವುದು ಜಿಲ್ಲೆಯ ಜನರು ಆತಂಕ ಪಡುವಂತಾಗಿದೆ. ಗಂಗಾವತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.