

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ದೊಡ್ಡಬಳ್ಳಾಪುರ ನಗರದ ಮುತ್ತೂರಿನಲ್ಲಿ ಆ.29 ರ ಸಂಜೆ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಪಟಾಕಿ ಸ್ಪೋಟದಲ್ಲಿ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಪ್ರತಿಷ್ಟಾಪನೆಗೆ ಅನುಮತಿ ಪಡೆದಿದ್ದ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಣೇಶೋತ್ಸವ ಆಯೋಜಕರಾದ ಮಾರುತಿ,(19) ಕಿಶೋರ್(28) ಹಾಗೂ ಮಂಜುನಾಥ್(38) ಬಂಧಿತರು.
ಮುಚ್ಚಳಿಕೆ ಪತ್ರವೇ ಆಧಾರ:
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೂ ಮುನ್ನ ಅನುಮತಿ ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ ಸೇರಿ ಯಾವುದೇ ಹಂತದಲ್ಲೂ ಗಲಾಟೆ, ಅವಘಡ ನಡೆದರೆ ತಾವೇ ಜವಾಬ್ದಾರಿ ಎಂದು ಅನುಮತಿ ನೀಡುವ ವೇಳೆ ಪೊಲೀಸರು ಸಂಘಟಕರಿಂದ ಪತ್ರ ಬರೆಸಿಕೊಂಡಿದ್ದರು. ಅದರ ಆಧಾರದ ಮೇಲೆಯೇ ಸಂಘಟಕರನ್ನು ಬಂಧಿಸಲಾಗಿದೆ.
ಗೋಡೆ ಬಿರುಕು, ಗಾಜು ಚೂರು: ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ದೊಡ್ಡಮಟ್ಟದಲ್ಲಿ ಪಟಾಕಿ ಸ್ಪೋಟಗೊಂಡಿದ್ದರಿಂದ ಗಣೇಶ ಪ್ರತಿಷ್ಠಾಪಿಸಿದ್ದ ಸಮೀಪದ ಮನೆಗಳ ಗೋಡೆಗಳಿಗೆ ಹಾಗೂ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಟಾಕಿ ಸ್ಟೋಟದ ಭಾರಿ ಸದ್ದಿಗೆ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ಮನೆ ಮಾಲೀಕರಲ್ಲಿ ಆತಂಕ ಮೂಡಿಸಿದೆ. ದೊಡ್ಡ ಸದ್ದಿಗೆ ಮನೆಯಲ್ಲಿದ್ದ ಮಕ್ಕಳು ಹಿರಿಯರು ತುಂಬಾ ಹೆದರಿಕೊಂಡಿದ್ದರು. ಕಿಟಕಿ ಗಾಜುಗಳು ಪುಡಿಯಾಗಿದ್ದರಿಂದ ಹೊರಗೆ ಓಡಿ ಬಂದೆವು ಎಂದು ಸ್ಥಳೀಯ ಮಹಿಳೆಯುರು ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ ಶಸಚಿಕಿತ್ಸೆ: ಪಟಾಕಿ ಸ್ಟೋಟದ ವೇಳೆ ತೀವ್ರ ಗಾಯಗೊಂಡಿದ್ದ ಕಾನ್ಸ್‌ಟೇಬಲ್ ಜಾಕೀರ್ ಹುಸೇನ್ ಅವರಿಗೆ ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ತೋಳಿನ ಭಾಗದಲ್ಲಿ ಮಾಂಸಖಂಡ ಕಿತ್ತುಬಂದಿರುವುದರಿಂದ ಶಸಚಿಕಿತ್ಸೆ ಅನಿವಾರ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಶನಿವಾರ ಶಸಚಿಕಿತ್ಸೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಸಣ್ಣಪುಟ್ಟ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಲವರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸಂಘಟಕರಿಗೆ ಎಚ್ಚರಿಕೆ: ಮುತ್ತೂರಿನ ದುರಂತ ಜಿಲ್ಲೆಯಲ್ಲಿ ಗಣೇಶೋತ್ಸವ ಸೇರಿ ವಿವಿಧ ಸಭೆ ಸಮಾರಂಭ ಆಯೋಜಿಸುವ ಸಂಘಟಕರಿಗೆ ಎಚ್ಚರಿಕೆಯ ಪಾಠವಾಗಿದೆ. ಸಮಾರಂಭಗಳಿಗೆ ಅನುಮತಿ ಪಡೆಯುವುದಷ್ಟೇ ಅಲ್ಲ ಅಷ್ಟೇ ಜವಾಬ್ದಾಯಿಂದ ಕಾರ್ಯಕ್ರಮ ಆಯೋಜನೆ ಮಾಡಬೇಕು, ಇದರಲ್ಲಿ ಏನೆ ಎಡವಟ್ಟು ಸಂಭವಿಸಿದರೂ ಆಯೋಜಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆ ರವಾನೆಯಾಗಿದೆ. ನಿಷೇಧವಿದ್ದರೂ ಪಿಇಒ ಮೂರ್ತಿಗಳನ್ನು ಪ್ರತಿಷ್ಟಾಪಿಸುವುದು ಮೆರವಣಿಗೆ ಸಮಯದಲ್ಲಿ ವಿದ್ಯುತ್ ಲೈನ್‌ಗಳಿಗೆ ತಗಲಿ ವಿದ್ಯುತ್ ಅವಘಡಗಳಿಗೆ ಕಾರಣವಾಗುವುದು, ಡಿಜೆ ಸದ್ದಿನಿಂದ ಶಬ್ದಮಾಲಿನ್ಯದ ಜತೆಗೆ ಆನಾರೋಗ್ಯಪೀಡಿತರು, ಹಿರಿಯ ನಾಗರೀಕರ ಪ್ರಾಣಕ್ಕೆ ಕಂಟಕವಾಗುವುದು ಇಂಥಹ ಅಪಸವ್ಯಗಳಿಗೆ ಮುಂದೆ ದಾರಿಯಾಗಬಾರದು ಎಂದು ಎಚ್ಚರಿಕೆ ನೀಡಿದಂತಾಗಿದೆ. ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಬಂದೋಬಸ್ತ್‌ಗಾಗಿ ಪೊಲೀಸರನ್ನು ನಿಯೋಜಿಸಲಾಗಿರುತ್ತದೆ ಅವರು ಜೀವದ ಹಂಗು ತೊರೆದು ಕಾರ್ಯಕ್ರಮದಲ್ಲಿ ಕರ್ತವ್ಯದಲ್ಲಿರುತ್ತಾರೆ ಆದರೆ ಇಂಥ ಅವಘಡಗಳಿಗೆ ಅವರೂ ಜೀವ ತೆರುವಂತ ಪರಿಸ್ಥಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಉತ್ಸವ ಹಾಗೂ ಸಭೆ ಸಮಾರಂಭಗಳಲ್ಲಿ ಅತಿರೇಕವನ್ನು ಬಿಟ್ಟು ಮುಂಜಾಗ್ರತೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ವಿಜರ್ಸನೆ ವೇಳೆ ಸಂಭವಿಸಿದ ಪಟಾಕಿ ಸ್ಟೋಟದಿಂದ ಬಾಲಕ ಮೃತಪಟ್ಟ ಪ್ರಕರಣ ನಿಜಕ್ಕೂ ವಿಷಾಧನೀಯ. ಆಯೋಜಕರು ಮುಂಜಾಗ್ರತೆ ವಹಿಸದ ಕಾರಣ ಇಂಥ ದುರ್ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈ ಭಾರಿ ಜಿಲ್ಲೆಯಲ್ಲಿ ಎಲ್ಲಿಯೂ ಪಟಾಕಿ ಬಳಸದಂತೆ ಆದೇಶ ಹೊರಡಿಲಾಗಿದೆ. ಉತ್ಸವಗಳು ಸಾರ್ವಜನಿಕರಿಗೆ ಖುಷಿ ನೀಡಬೇಕೆ ಹೊರತು ಆತಂಕ ತಂದೊಡ್ಡಬಾರದು ಈ ಹಿನ್ನೆಯಲ್ಲಿ ಎಲ್ಲರೂ ನಿಯಮ ಪಾಲಿಸಬೇಕು.
ಎ.ಬಿ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ
ಪಟಾಕಿ ದುರಂತದ ಪ್ರಕರಣದ ಹಿನ್ನೆಲೆಯಲ್ಲಿ ಗಣೇಶೋತ್ಸವ ಆಯೋಜಕರಲ್ಲಿ ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಣೇಶ ಪ್ರತಿಷ್ಠಾಪನೆಗೂ ಮುನ್ನ ನಿಯಮ ಪಾಲನೆ ಸೇರಿ ಯಾವುದೇ ಅಹಿತಕರ ಘಟನೆಗಳಿಗೆ ಜವಾಬ್ದಾರಿ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿರುತ್ತದೆ ಇದರ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಅಮರೇಶ್‌ಗೌಡ, ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್