ಕಲ್ಯಾಣಮಂಟಪದಲ್ಲಿ ಚಿನ್ನಾಭರಣ ಕದ್ದವನು ಅರೆಸ್ಟ್

seena
ಆರೋಪಿ ಸೀನಾ
Published on

ವಿಜಯವಾಣಿಸುದ್ದಿಜಾಲ ನೆಲಮಂಗಲ
ನಗರದ ಕಲ್ಯಾಣ ಮಂಟಪದಲ್ಲಿನ ಪ್ರತ್ಯೇಕ 2 ಕಳವು ಪ್ರಕರಣದಲ್ಲಿ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು, ಚಿನ್ನಾಭರಣ, ಮೊಬೈಲ್, ಬೈಕ್ ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಸುಂದರ್‌ಸಾಗರ ನಿವಾಸಿ ಎಸ್.ಎನ್.ಸೀನ(21) ಬಂಧಿತ ಆರೋಪಿ.
ಮಾ.1ರಂದು ನಗರದ ಸುಭಾಷ್‌ನಗರ ನಿವಾಸಿ ಸುಮಾ ಎಂಬುವವರು ನಗರದ ಎಸ್‌ಎಲ್‌ಆರ್ ಕಲ್ಯಾಣ ಮಂಟಪಕ್ಕೆ ಸಂಬಂಧಿಕರ ಮದುವೆಗೆ ಕುಟುಂಬ ಸಮೇತ ಬಂದಿದ್ದು, ಮಾ,2ರಂದು ಮದುವೆ ಮುಗಿಸಿ ಮಧ್ಯಾಹ್ನ ಚಿನ್ನಾಭರಣ ಬಿಚ್ಚಿ ಬ್ಯಾಗ್‌ನಲ್ಲಿ ಇರಿಸಿ ಊಟಕ್ಕೆ ತೆರಳಿದ್ದರು. ಇದನ್ನು ಗಮನಿಸಿದ್ದ ಸೀನಾ ಸುಮಾರು 45ಗ್ರಾಂ ತೂಕ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಜತೆಗೆ ಅದೇ ಕಲ್ಯಾಣ ಮಂಟಪದಲ್ಲಿ ಮಾ.2ರಂದು ಬೇರೊಂದು ಮದುವೆಗೆ ಬಂದಿದ್ದ ಬೆಂಗಳೂರು ಉತ್ತರ ತಾಲೂಕಿನ ಆಲೂರು ಗ್ರಾಮ ನಿವಾಸಿಯಾಗಿದ್ದ ಸಾವಿತ್ರಿ ಎಂಬಾಕೆಯ ಬ್ಯಾಗ್‌ನಲ್ಲಿದ್ದ 20ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಕೂಡ ಕಳವು ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು.

ಸುಳಿವು ನೀಡಿದ್ದ ಮೊಬೈಲ್ ಕಲ್ಯಾಣ ಮಂಟಪದಲ್ಲಿನ ಕಳವು ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ರಾಕೇಶ್ ನೇತೃತ್ವದ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದರು. ಆಗ ಅನುಮಾನಾಸ್ಪದ ರೀತಿಯಲ್ಲಿ ಕಲ್ಯಾಣ ಮಂಟಪದಲ್ಲಿ ಓಡಾಡುತ್ತಿದ್ದ ಆರೋಪಿಯ ಗುರುತು ಕೂಡ ಪತ್ತೆಯಾಗಿತ್ತು. ಸಾವಿತ್ರಿ ಎಂಬಾಕೆಯ ಬ್ಯಾಗ್‌ನಲ್ಲಿದ್ದ ಮೊಬೈಲ್ ಕದ್ದಿದ್ದ ಸೀನಾ ಸುಮಾರು 3 ತಿಂಗಳ ನಂತರ ಆ ಮೊಬೈಲ್ ಆನ್ ಮಾಡಿದ್ದು, ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮೊಬೈಲ್ ನೆಟ್‌ವರ್ಕ್ ಆಧಾರ ಮೇಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಬಳಿ ಸ್ನೇಹಿತನ ಮನೆಯಲ್ಲಿದ್ದ ಆರೋಪಿಯನ್ನು ಬಂಧಿಸಿ 60ಗ್ರಾಂ ಚಿನ್ನಾಭರಣ, ಮೊಬೈಲ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಶೋಕಿಗಾಗಿ ಸ್ಟ್ ಟೈಂ ಕದ್ದ! ನಗರದ ರಾಯನ್‌ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದ ಆರೋಪಿ ಸೀನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶೋಕಿ ಜೀವನಕ್ಕಾಗಿ ಮೊದಲ ಬಾರಿಗೆ ಕಲ್ಯಾಣ ಮಂಟಪದಲ್ಲಿ ಕಳವು ಮಾಡಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕಳವು ಪ್ರಕರಣ ಭೇದಿಸಿದ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ರಾಕೇಶ್, ಎಎಸ್‌ಐ ಬಿ.ಎಸ್.ರಘು, ಸಿಬ್ಬಂದಿ ಕೇಶವಮೂರ್ತಿ, ಬಸವರಾಜು, ಮಹೇಶ್, ಇಂದ್ರಮ್ಮ, ಹರೀಶ್ ಸೇರಿ ಫಕ್ರುಬಾಸ್ ಕಾರ್ಯಕ್ಕೆ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net