ತಲೆಮರೆಸಿಕೊಂಡಿದ್ದ ಯುವಕ ಸೆರೆ - ವಿವಾಹ ಭರವಸೆ ನೀಡಿ ವಂಚನೆ ಪ್ರಕರಣ - ತಲೆಮರೆಸಿಕೊಳ್ಳಲು ನೆರವಾದ ತಂದೆಯೂ ಬಂಧನ

PTR_5 JUL_3
Published on

ಪುತ್ತೂರು: ವಿವಾಹ ಭರವಸೆ ನೀಡಿ ಯುವತಿಯನ್ನು ಗರ್ಭಿಣಿಯಾಗಿದ ಪ್ರಕರಣದಲ್ಲಿ ೧೦ ದಿನಗಳಿಂದ ತಲೆಮರೆಸಿಕೊಂಡಿದ್ದ ಯುವಕನನ್ನು ಪೊಲೀಸರ ತಂಡ ಮೈಸೂರಿನಲ್ಲಿ ಬಂಧಿಸಿದೆ. ಆರೋಪಿ ಪರಾರಿಯಾಗಲು ಸಹಕಾರ ನೀಡಿದ ಆರೋಪದಲ್ಲಿ ಆತನ ತಂದೆಯನ್ನೂ ಬಂಧಿಸಲಾಗಿದೆ.

ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜೆ.ರಾವ್(೨೧), ವಾಸ್ತುತಜ್ಞ ಪಿ.ಜಿ.ಜಗನ್ನಿವಾಸ ರಾವ್(೫೩) ಬಂಧಿತರು. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪುತ್ರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಂದೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಆರೋಪಿ ಪ್ರೌಢಶಾಲೆಯಿಂದ ಸಹಪಾಠಿಯಾಗಿರುವ ಯುವತಿಯನ್ನು ಪ್ರೀತಿಸಿ, ವಿವಾಹವಾಗುವುದಾಗಿ ನಂಬಿಸಿ ಮನೆಗೆ ಕರೆಸಿಕೊಂಡು ಹೋಗಿ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿದ್ದನು. ವಿಚಾರ ತಿಳಿಯುತ್ತಿದ್ದಂತೆ ಎರಡು ಕುಟುಂಬದ ನಡುವೆ ಮಾತುಕತೆ ನಡೆದಿತ್ತು. ಈ ವೇಳೆ ಯುವಕ ಆತ್ಮಹತ್ಯೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಮೇ ೧೦ರಂದು ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದಳು. ಯುವಕನ ತಂದೆ ಜಗನ್ನಿವಾಸ್ ರಾವ್ ಪುತ್ರನಿಗೆ ೨೧ ವರ್ಷವಾದ ಬಳಿಕ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಮೇ ೧೧ರಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಯುವಕ ವಿವಾಹವಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜೂನ್ ೨೪ರಂದು ಯುವತಿ ಪ್ರಕರಣ ದಾಖಲಿಸಿದ್ದಳು. ಜೂನ್ ೨೭ರಂದು ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಹಲವರ ವಿಚಾರಣೆ

ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ಮನೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಪುತ್ತೂರಿನ ಭಾಗವತ ರಮೇಶ್ ಭಟ್ ಹಾಗೂ ಹುಡುಗನ ದೊಡ್ಡಪ್ಪ ಪಿ.ಜಿ.ಚಂದ್ರಶೇಖರ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅನಾರೋಗ್ಯ ನೆಪದಲ್ಲಿ ಜಗನ್ನಿವಾಸ ರಾವ್ ಆಸ್ಪತ್ರೆಗೆ ದಾಖಲಾಗಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದು, ಈ ಬಗ್ಗೆ ವೈದ್ಯರಿಗೂ ಪೊಲೀಸರು ಖಡಕ್ ಸೂಚನೆ ನೀಡಿದ ಬಳಿಕ ಬಿಡುಗಡೆಗೊಂಡಿದ್ದರು.

ತೋಟದ ಮನೆಯಲ್ಲಿ ಬಂಧಿ!

ಆರೋಪಿಯ ತಂದೆ ಜಗನ್ನಿವಾಸ ರಾವ್ ರಾಜ್ಯದ ವಿವಿಧ ಕಡೆಯಲ್ಲಿ ದೇವಸ್ಥಾನಗಳಿಗೆ ವಾಸ್ತುಶಿಲ್ಪ ಮಾಡಿದ ಹಿನ್ನೆಲೆಯಲ್ಲಿ ಪರಿಚಯದ ಒಬ್ಬೊಬ್ಬರ ಮನೆಗೆ ಒಂದೊಂದು ದಿನ ಕಳುಹಿಸಿದ ಮಾಹಿತಿ ಬಹಿರಂಗವಾಗಿದೆ. ಪೊಲೀಸರು ಕೊನೆಗೆ ಜಗನ್ನಿವಾಸ ರಾವ್ ಸ್ನೇಹಿತರೊಬ್ಬರಿಗೆ ಸೇರಿದ ಮೈಸೂರಿನ ಟಿ.ನರಸೀಪುರದ ತೋಟದ ಮನೆಯಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪುತ್ತೂರಿನಿಂದ ಪರಾರಿಯಾಗಿದ್ದಾನೆ. ವಿಸ್ತೃತ ತನಿಖೆ ಮೂಲಕ ಆರೋಪಿಯನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಷ್ಟು ದಿನ ಪರಾರಿಯಾಗಲು ಸಹಕಾರ ನೀಡಿದ ಯುವಕನ ತಂದೆಯನ್ನೂ ಬಂಧಿಸಲಾಗಿದೆ. ಅವರ ಮೇಲೆ ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

| ಡಾ.ಅರುಣ್ ಕೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net