ಗ್ರಾಪಂ ಸದಸ್ಯ ಹಾಗೂ ಇನ್ನಿಬ್ಬರಿಗೆ ನ್ಯಾಯಾಂಗ ಬಂಧನ

SULIBELE TAHASILDAR 20
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಸರ್ಕಾರಿ ಗೋಮಾಳ ವೀಕ್ಷಣೆಗೆ ತೆರಳಿದ್ದ ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ಅವರ ಸರ್ಕಾರಿ ವಾಹನ ಅಡ್ಡಗಟ್ಟಿ ಟ್ಯಾಕ್ಟರ್ ಹತ್ತಿಸಿ ಕೊಲೆಯತ್ನ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಸೂಲಿಬೆಲೆ ಪೊಲೀಸರು ಭಾನುವಾರ ಬಂಧಿಸಿದ್ದ ಗ್ರಾಪಂ ಸದಸ್ಯ ಸೇರಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ತೆನೆಯೂರು ಗ್ರಾಮದ ಗ್ರಾಪಂ ಸದಸ್ಯ ಶಶಿಕಿರಣ್(40), ಸಹಚರರಾದ ಮುನಿರಾಜು(35), ಮಂಜುನಾಥ್(37) ಕಂಬಿ ಎಣಿಸುತ್ತಿದ್ದು, ಇದುವರೆಗೆ ಆರೋಪಿಗಳು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದ್ದ ಸುಮಾರು 15 ಕೋಟಿ ರೂ.ಮೌಲ್ಯದ 4.5 ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ತಾಲೂಕು ಆಡಳಿತ ಕಾರ್ಯಪ್ರವೃತ್ತವಾಗಿದೆ.

ಸ್ಮಶಾನ ಜಾಗದಲ್ಲಿ ಮೈನಿಂಗ್: ಈ ಹಿಂದೆ ಅರಣ್ಯ ಇಲಾಖೆ ಸುಪರ್ದಿಯಲ್ಲಿದ್ದ ಜಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಈಗಾಗಲೇ ಜೈಲು ಕಂಡಿದ್ದ ಆರೋಪಿಗಳು ನಂತರದಲ್ಲಿ ತೆನಯೂರಿನ 4.5 ಎಕರೆ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ಶುರುಮಾಡಿಕೊಂಡಿದ್ದರು ಎನ್ನಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದ ಜಾಗ ಸ್ಮಶಾನ ಭೂಮಿಯಾಗಿದೆ ಎಂದು ತಹಸೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ. ಅಕ್ರಮವಾಗಿ ಸರ್ಕಾರಿ ಜಮೀನು ಸ್ವಾಧೀನಪಡಿಸಿಕೊಂಡ ಆರೋಪದಡಿ ಪರಿಶೀಲನೆ ತೆರಳಿದ್ದ ವೇಳೆ ಈ ಪ್ರಕರಣ ನಡೆದಿದ್ದು, ತಾಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ ಸರ್ಕಾರದ ಸುಪರ್ಧಿಗೆ ಪಡೆಯಲು ಸಜ್ಜಾಗಿದೆ.

ಅಡ್ಡಗಟ್ಟಿ ಜೀವಬೆದರಿಕೆ: ತೆನೆಯೂರಿನಲ್ಲಿ ತಹಸೀಲ್ದಾರ್ ಕೊಲೆ ಯತ್ನ ಪ್ರಕರಣ ಬಳಿಕ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ತಹಸೀಲ್ದಾರ್ ಅವರ ವಾಹನ ತೆರಳುವಂತೆ ಅನುವು ಮಾಡಿಕೊಟ್ಟರು. ವಾಹನ ಸ್ವಲ್ಪ ದೂರ ಚಲಿಸುತ್ತಿದ್ದಂತೆ ಮತ್ತೆ ಮತ್ತೊಂದು ವಾಹನದಲ್ಲಿ ತಹಸೀಲ್ದಾರ್ ವಾಹನವನ್ನು ಅಡ್ಡಗಟ್ಟಿದ ಮೊದಲ ಆರೋಪಿ ಶಶಿಕಿರಣ್ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದ. ನನ್ನ ಜಮೀನಿನಲ್ಲಿ ಕಾಲಿಡಲು ಯಾರು ನಿನಗೆ ಅಧಿಕಾರ ನೀಡಿದ್ದು ಎಂದು ಪ್ರಶ್ನಿಸಿ ಹಲ್ಲೆ ನಡೆಸಲು ಮುಂದಾಗಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಕರಣ? ಬಗುರ್‌ಹುಕುಂ ಕಮಿಟಿಯಲ್ಲಿ ನಮೂನೆ 53 ಅರ್ಜಿ ಸಲ್ಲಿಸಿ ಸ.ನಂ 20ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಸ್ವಾಧೀನದಲ್ಲಿರುವ ರೈತರ ಜಮೀನು ಪರಿಶೀಲಿಸಲು ಏ.17ರ ಸಂಜೆ ತೆನೆಯೂರಿಗೆ ತಹಸೀಲ್ದಾರ್ ಅವರು ಸೂಲಿಬೆಲೆ ಹಾಗೂ ಬೆಂಡಿಗಾನಹಳ್ಳಿ ನಾಡಕಚೇರಿ ಅಧಿಕಾರಿಗಳೊಂದಿಗೆ ಹೋಗಿದ್ದ ಸಮಯದಲ್ಲಿ ಅದೇ ಸರ್ವೆ ನಂಬರ್‌ನಲ್ಲಿ ಮಣ್ಣು ತೆಗೆದು ಕಾಂಪೌಂಡ್ ನಿರ್ಮಿಸಿಕೊಂಡಿರುವ ಶಶಿಕಿರಣ್ ಹಾಗೂ ಸಹಚರರು ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ತಹಸೀಲ್ದಾರ್ ಅವರಿಗೆ ಗುದ್ದಲು ಪ್ರಯತ್ನಿಸಿದ್ದರು. ನಂತರ ಆ ಮೂವರೂ ಮಣ್ಣು ತೆಗೆದು ಕಾಂಪೌಂಡ್ ನಿರ್ಮಿಸುತ್ತಿರುವುದು ನಾವೇ ಎಂದು ದರ್ಪದಿಂದ ತಹಸೀಲ್ದಾರ್ ಜೀಪನ್ನು ಅಡ್ಡಗಟ್ಟಿ, ಅವಾಚ್ಯವಾಗಿ ನಿಂದಿಸಿ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ.

ಇನ್ನಿಬ್ಬರು ಅಧಿಕಾರಿಗಳ ಮೇಲೂ ಹಲ್ಲೆಗೆ ಯತ್ನ: ತೆನೆಯೂರಿನಲ್ಲಿ ಸ್ಥಳ ಪರಿಶೀಲನೆ ತೆರಳಿದ್ದ ತಹಸೀಲ್ದಾರ್ ಸೋಮಶೇಖರ್ ಸೇರಿ ಕಂದಾಯ ಅಧಿಕಾರಿ ನ್ಯಾನಮೂರ್ತಿ ಹಾಗೂ ಮತ್ತೊಬ್ಬ ಅಧಿಕಾರಿ ವಿರುದ್ಧವೂ ಹಲ್ಲೆಗೆ ಮುಂದಾಗಿದ್ದರು. ಎಲ್ಲ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮೂವರು ಅಧಿಕಾರಿಗಳು ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಇದನ್ನು ಜಾತ್ಯಾತೀತವಾಗಿ ಪಕ್ಷಾತೀತವಾಗಿ ವಿರೋಧಿಸುತ್ತಿದ್ದು, ಸರ್ಕಾರಿ ಅಧಿಕಾರಿಗಳ ಆತ್ಮಸ್ಥೈರ್ಯ ಹೆಚ್ಚಿಸಲು ನಮ್ಮ ಬೆಂಬಲ ಸದಾ ಇರುತ್ತದೆ, ಪ್ರಕರಣ ಸಂಬಂಧ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿದೆ, ಇಂಥ ವಿಷಯ ಮತ್ತೆ ಎಲ್ಲಿಯೂ ಮರುಕಳಿಸಬಾರದು ಆದ ಕಾರಣ ಪ್ರಮಾಣಿಕವಾಗಿ ಸರ್ಕಾರಿ ಕೆಲಸ ಮಾಡುವ ಅಧಿಕಾರಿಗಳಿಗೆ ನಮ್ಮ ಬೆಂಬಲ ಸಹಕಾರ ಇದ್ದೇ ಇರುತ್ತದೆ.

ಶರತ್‌ಬಚ್ಚೇಗೌಡ, ಶಾಸಕ ಹೊಸಕೋಟೆ

ಟ್ರ್ಯಾಕ್ಟರ್‌ನಿಂದ ಗುದ್ದಿ ಕೊಲೆಗೆ ಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪ ಹಾಗೂ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ಮಾಡುತ್ತಿರುವ ಆರೋಪದ ಮೇಲೆ ಶಶಿಕಿರಣ್ ಸೇರಿ ಮೂವರು ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಮಧ್ಯೆ ಪ್ರವೇಶದಿಂದ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಅಧಿಕಾರಿಗಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಶಂಕರಪ್ಪ ಶರಣಪ್ಪ ಪಾಟೀಲ್, ಡಿವೈಎಸ್‌ಪಿ ಹೊಸಕೋಟೆ

ಸುಮಾರು 15 ಕೋಟಿ ರೂ.ಮೌಲ್ಯದ 4.5 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮೈನಿಂಗ್ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜಾಗದ ಪರಿಶೀಲನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಶೀಘ್ರದಲ್ಲೇ ಸರ್ವೇ ಕಾರ್ಯ ನಡೆಸಿ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗುವುದು. ಅಕ್ರಮ ಗಣಿಗಾರಿಕೆ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಮಶೇಖರ್, ತಹಸೀಲ್ದಾರ್ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net