

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕಳ್ಳತನ ಮಾಡಲು ಹೊಂಚುಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸ್ ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಕಮ್ಮನಹಳ್ಳಿ ನಿವಾಸಿ ಸಯ್ಯದ್ ಸಬೀರ್(35), ಕನಕನಗರದ ನಿವಾಸಿ ಅಸ್ಲಾಂಪಾಷಾ(26) ಬಂಧಿತರು.
ಕಳೆದ ಜ.13ರಂದು ನಗರಸಭೆ ವ್ಯಾಪ್ತಿಯ ಅರಿಶಿನಕುಂಟೆ ಬಳಿ ಇಬ್ಬರು ದುಷ್ಕರ್ಮಿಗಳು ಕಳ್ಳತನಕ್ಕೆ ಯತ್ನಿಸುತ್ತಿದ್ದರು. ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಎಸ್.ಡಿ.ಶಶಿಧರ್ ನೇತೃತ್ವದ ಸಿಬ್ಬಂದಿ ರಾತ್ರಿ ಗಸ್ತು ಮಾಡುತ್ತಿದ್ದ ವೇಳೆ ಗಮನಿಸಿ ಆರೋಪಿಗಳನ್ನು ಹಿಂಬಾಲಿಸಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಒಂಟಿಯಾಗಿ ತಿರುಗಾಡುವವರನ್ನು ಗುರಿಯಾಗಿಟ್ಟುಕೊಂಡು ರಾಬರಿ ನಡೆಸುತ್ತಿದ್ದರು. ಶೋಕಿ ಜೀವನ ನಡೆಸಲು ಕಳ್ಳತನಕ್ಕೆ ಇಳಿದಿದ್ದರು ಎಂದ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಿಧ ಪೊಲೀಸ್ ಪ್ರಕರಣ ದಾಖಲು: ಬಂಧಿತ ಆರೋಪಿಗಳು ನೆಲಮಂಗಲ ನಗರ, ವಿಶ್ವನಾಥಪುರ, ಚನ್ನಪಟ್ಟಣ ಸೇರಿ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕಳ್ಳತನ, ದರೋಡೆ, ಹಲ್ಲೆ ಸೇರಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಶ್ಲಾಘನೀಯ: ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಎಸ್‌ಐ ಧನರಾಜ್, ಎಎಸ್‌ಐ ಬಿ.ಎಸ್.ರಘು, ಸಿಬ್ಬಂದಿ ಬಸವರಾಜ್, ಪ್ರಕೃದ್ದೀನ್‌ಪಠಾಣ್, ಹರೀಶ್, ಮಂಜುನಾಥ್ ಅವರನ್ನು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.