ಜಿಪಿಎಸ್ ಅಳವಡಿಸಿ ಕಿಡ್ನಾಪ್

hebb
Published on

 ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ

ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಕೋಟಿ ಕುಳಗಳನ್ನು ಟಾರ್ಗೆಟ್ ಮಾಡಿ, ಅವರ ವಾಹನಗಳಿಗೆ ಜಿಪಿಎಸ್ ಸಿಸ್ಟಂ ಅಳವಡಿಸಿ ಚಲನವಲನಗಳ ಮಾಹಿತಿ ಕಲೆಹಾಕಿ ವ್ಯವಸ್ಥಿತವಾಗಿ ಕಿಡ್ನಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ದುಷ್ಕರ್ಮಿಗಳ ತಂಡದ ನಾಲ್ವರು ಹೆಬ್ಬಗೋಡಿ ಪೊಲೀಸರ ಅತಿಥಿಗಳಾಗಿದ್ದಾರೆ.

ಇಗ್ಗಲೂರಿನ ಮುರಳಿ (32) ಮದನ್(28) ಲಕ್ಷ್ಮಿನಾರಾಯಣ (26) ಹಾಗೂ ಸೈಯದ್‌ಜಾರ್(30) ಬಂಧಿತರು.

ಹೈಟೆಕ್ ಕಿಡ್ನಾಪರ್ಸ್‌: ಆನೇಕಲ್ ತಾಲೂಕು ಸೇರಿ ಸುತ್ತಮುತ್ತಲ ವ್ಯಾಪ್ತಿಯಲ್ಲಿನ ರಿಯಲ್‌ಎಸ್ಟೇಟ್ ಉದ್ಯಮಿಗಳು ಹಾಗೂ ಶ್ರೀಮಂತರನ್ನು ಗುರಿಯಾಗಿಸಿಕೊಂಡು ತಂತ್ರ ರೂಪಿಸುತ್ತಿದ್ದ ದುಷ್ಕರ್ಮಿಗಳು ಅಂಥವರು ಓಡಾಡುವ ಕಾರುಗಳಿಗೆ ಜಿಪಿಎಸ್ ಸಿಸ್ಟಂ ಅಳವಡಿಸುತ್ತಿದ್ದರು. ತಿಂಗಳುಗಟ್ಟಲೆ ಅವರ ವಾಹನಗಳು ಎಲ್ಲೆಲ್ಲಿ ಹೋಗುತ್ತವೆ ಬರುತ್ತವೆ ಎಂಬುದನ್ನು ಮಾನಿಟರ್ ಮಾಡುತ್ತಿದ್ದರು. ದಿನನಿತ್ಯ ಎಲ್ಲಿಗೆ ಹೋಗಿ ಎಲ್ಲಿಂದ ಬರುತ್ತಾರೆ ಎಂಬುದನ್ನು ಖರಾರುವಕ್ಕಾಗಿ ಗುರುತು ಮಾಡಿ ಜಾಲ ಬೀಸುತ್ತಿದ್ದರು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಒಂಟಿಯಾಗಿದ್ದಾಗ ಕಾರ್ಯಾಚರಣೆ: ಹಣವಂತರ ಚಲನವಲನಗಳನ್ನು ಗಮನಿಸಿ ಮಾಹಿತಿ ಕಲೆಹಾಕುತ್ತಿದ್ದ ದುಷ್ಕರ್ಮಿಗಳು ವಾಹನದಲ್ಲಿ ಒಂಟಿಯಾಗಿ ಸಂಚರಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ರೂಪಿಸುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ವಾಹನ ಚಲಿಸುತ್ತಿದ್ದ ವೇಳೆ ವಾಹನವನ್ನು ಅಡ್ಡಗಟ್ಟಿ ಮಾರಕಾಸ ತೋರಿಸಿ ಬೆದರಿಸುತ್ತಿದ್ದ ದುಷ್ಕರ್ಮಿಗಳು ಅವರನ್ನು ಕಿಡ್ನಾಪ್ ಮಾಡಿ ಕೃಷ್ಣಗಿರಿ ಅರಣ್ಯ ಪ್ರದೇಶಕ್ಕೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿಂದ ಮನೆಯವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಹಣ ಪಡೆದು ವ್ಯಕ್ತಿಗಳನ್ನು ಬಿಡುಗಡೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

ಜ.9ರಂದು ದೂರು: ಇದೇ ತಿಂಗಳ 9 ರಂದು ಹೆಬ್ಬಗೋಡಿ ಠಾಣೆಯಲ್ಲಿ ಕಾರಿನಲ್ಲಿ ಜಿಪಿಎಸ್ ಇಟ್ಟಿದ್ದಾರೆ ಎಂಬ ವಿಚಾರವಾಗಿ ಜಲಂದರ್ ಎಂಬುವರು ದೂರು ನೀಡಿದ್ದರು. ಇದರ ಬೆನ್ನತ್ತಿದ ಪೊಲೀಸರಿಗೆ ಜಿಪಿಎಸ್ ಅಳವಡಿಸಿ ಕಿಡ್ನಾಪ್ ಮಾಡುತ್ತಿದ್ದ ಬಗ್ಗೆ ತಿಳಿದುಬಂದಿತ್ತು.

2ನೇ ಬಾರಿ ತಂತ್ರ: ಕಳೆದೆರಡು ತಿಂಗಳ ಹಿಂದೆ ದೂರು ನೀಡಿರುವ ಜಲಂದರ್ ಅವರನ್ನು ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು 30 ಲಕ್ಷ ರೂ.ಪಡೆದು ಬಿಟ್ಟುಕಳುಹಿಸಿದ್ದರು. ಈ ಬಗ್ಗೆ ದೂರುದಾರ ಎಲ್ಲಿಯೂ ಬಾಯ್ಬಿಟ್ಟಿರಲಿಲ್ಲ ಎನ್ನಲಾಗಿದೆ. ಕಳೆದೆರಡು ದಿನದ ಹಿಂದೆ ಕಾರಿನಲ್ಲಿ ಜಿಪಿಎಸ್ ಅಳವಡಿಸಿರುವುದನ್ನು ಗಮನಿಸಿದ ಜಲಂದರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಜಿಪಿಎಸ್ ತಂತ್ರದ ಮೇಲೆ ತನಿಖೆ ಆರಂಭಿಸಿದ ಪೊಲೀಸರಿಗೆ ದುಷ್ಕರ್ಮಿಗಳ ಮಾಹಿತಿ ದೊರೆತಿದೆ. ಸಿಸಿ ಕ್ಯಾಮರಾ ಹಾಗೂ ಇನ್ನಿತರ ಕೋನಗಳಲ್ಲಿ ತನಿಖೆ ನಡೆಸಿದ ಪೊಲೀಸರು ದುಷ್ಕರ್ಮಿಗಳನ್ನು ಬಲೆಗೆ ಕೆಡವಿದ್ದಾರೆ

ಮತ್ತಷ್ಟು ಮಂದಿ ಶಂಕೆ: ಇದೊಂದು ವ್ಯವಸ್ಥಿತವಾಗಿ ನಡೆಯುತ್ತಿದ್ದ ದುಷ್ಕೃತ್ಯ ಎಂಬುದು ತನಿಖೆಯಲ್ಲಿ ತಿಳಿದುಬಂದಿದ್ದು, ಈ ತಂಡದಲ್ಲಿ ಮತ್ತಷ್ಟು ಜನರಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಮತ್ತಷ್ಟು ಮಂದಿಯನ್ನು ಕಿಡ್ನಾಪ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ. ಇದರಲ್ಲಿ ಸುಬ್ಬಾರೆಡ್ಡಿ ಹಾಗೂ ಸತ್ಯನಾರಾಯಣ ಎಂಬುವರು ಪ್ರಮುಖರಾಗಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net