ಪ್ರವಾಸಿಗರ ಸುಲಿಗೆ ಮಾಡುತ್ತಿದ್ದವರ ಬಂಧನ

Dbp4
ದೊಡ್ಡಬಳ್ಳಾಪುರದ ವಿಶ್ವೇಶ್ವರಯ್ಯ ಘಾಟಿ ಡ್ಯಾಂ ಬಳಿ ಆರೋಪಿಗಳೊಂದಿಗೆ ಪೊಲೀಸರು ಮಹಜರು ನಡೆಸುತ್ತಿರುವುದು.
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ವಿಶ್ವೇಶ್ವರಯ್ಯ ಡ್ಯಾಮ್ ಬಳಿ ಪ್ರಕೃತಿ ಸೊಬಗನ್ನು ನೋಡಲು ಪ್ರವಾಸಕ್ಕೆ ಬಂದಿದ್ದ ಹುಡುಗ-ಹುಡುಗಿಯನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಮೂವರು ದುಷ್ಕರ್ಮಿಗಳನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ಅಕ್ರಮ್‌ಪಾಷ ಅಲಿಯಾಸ್ ಚಕ್ಕು (25), ನಜೀರ್ ಅಲಿಯಾಸ್ ಅಮರ್ (24) ಹಾಗೂ ಜಮೀರ್ (24) ಬಂಧಿತರು. ಚಿನ್ನದ ಸರ, ಉಂಗುರವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಏನಿದು ಪ್ರಕರಣ?
ಆ. 8 ರಂದು ಬೆಂಗಳೂರಿನ ಸೋಮೇಶ್ವರ ಲೇಔಟ್ ನ ಸುದೇಶ್ ಕುಮಾರ್ ಎಂಬುವರು ಭಾವಿಪತ್ನಿಯೊಂದಿಗೆ ಘಾಟಿ ಸುಬ್ರಮಣ್ಯ ಕ್ಷೇತ್ರ ವ್ಯಾಪ್ತಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಮ್ ಜಲಪಾತ ವೀಕ್ಷಣಗೆ ಆಗಮಿಸಿದ್ದರು. ಡ್ಯಾಮ್ ಬಳಿ ಸುತ್ತಾಡುತ್ತಿದ್ದಾಗ, ದುಷ್ಕರ್ಮಿಗಳ ತಂಡ ಅವರನ್ನು ಹಿಂಬಾಲಿಸಿ ಅವರು ಸುತ್ತಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದರು. ಬಳಿಕ ಈ ವಿಡಿಯೋ ತೋರಿಸಿ ಬೆದರಿಸಿದ್ದರು. ಹಣ ಕೊಡುವಂತೆ ಹೆದರಿಸಿದ್ದರು. ಸುದೇಶ್‌ಕುಮಾರ್ ತನ್ನ ಬಾವಿ ಪತ್ನಿಗೆ ಖರೀದಿಸಿದ್ದ ಚಿನ್ನದ ಉಂಗುರ, ಸರ ಹಾಗೂ ಪೆಂಡೆಟ್‌ಅನ್ನು ಕಸಿದುಕೊಂಡಿದ್ದರು ಅಲ್ಲದೆ ಹಣ ಕೊಡುವಂತೆ ಪೀಡಿಸಿ ಹಲ್ಲೆ ಮಾಡಿದ್ದರು.
ಹಣ ಇಲ್ಲ ಎಂದಾಗ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.
ಠಾಣೆಯಲ್ಲಿ ದೂರು ದಾಖಲು: ಈ ಬಗ್ಗೆ ಸುದೇಶ್ ಕುಮಾರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ಮತ್ತು ತಂಡ ದೂರುದಾರರು ನೀಡಿದ ಸುಳಿವಿನ ಜಾಡು ಹಿಡಿದು ಟವರ್ ಲೊಕೇಷನ್ ಸೇರಿ ನಾನಾ ಆಯಾಮಗಳಲ್ಲಿ ತನಿಖೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೇ ಕಳ್ಳರು: ಪ್ರಕರಣದಲ್ಲಿ ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆಯೂ ಪ್ರಕರಣಗಳಿವೆ, ಇವರು ಸುಲಿಗೆ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ. ಇವರ ವಿರುದ್ಧ ಕೇಸ್ ದಾಖಲಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಸಿಗರ ಸುಲಿಗೆಕೋರರಿದ್ದಾರೆ: 1917ರಲ್ಲಿ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಸುತ್ತಮುತ್ತಲೂ ಪ್ರಕೃತಿ ಸೊಬಗಿನ ಜತೆ ಡ್ಯಾಮ್ ತುಂಬಿ ಜಲಪಾತ ಸೃಷ್ಟಿಯಾಗಿದೆ. ಘಾಟಿ ಕ್ಷೇತ್ರಕ್ಕೆ ಬರುವವರು ಇಲ್ಲಿಯೂ ಬರುತ್ತಾರೆ. ಪ್ರವಾಸಿರನ್ನು ಗುರಿಯಾಗಿಸಿಕೊಂಡು ಅವರಿಂದ ಸುಲಿಗೆ ಮಾಡಲು ಸ್ಥಳೀಯ ದುಷ್ಕರ್ಮಿಗಳು ಹೊಂಚುಹಾಕುತ್ತಾರೆ. ಹಣ ಒಡವೆಗಳನ್ನು ದೋಚುತ್ತಾರೆ, ನಿರಾಕರಿಸಿದರೆ ಹಲ್ಲೆ ನಡೆಸುತ್ತಾರೆ ಈ ಬಗ್ಗೆ ಪ್ರವಾಸಿಗರು ಮುಂಜಾಗ್ರತೆ ವಹಿಸಬೇಕು ಒಬ್ಬಂಟಿಯಾಗಿ ಈ ಭಾಗದಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಜೋಡಿಯೊಂದು ಏಕಾಂಗಿಯಾಗಿ ತಿರುಗಾಡುತ್ತಿರುವುದನ್ನು ಗಮನಿಸಿ ದುಷ್ಕರ್ಮಿಗಳು ಹಿಂಬಾಲಿಸಿ ಬಂದಿದ್ದಾರೆ. ಅವರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು ಬೆದರಿಸಿದ್ದಾರೆ, ಚಿನ್ನಾಭರಣ ಕೊಡುವಂತೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸುಲಿಗೆಗೊಳಗಾದವರು ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನುಬಿದ್ದು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಚಿನ್ನಾಭರಣ ವಶಪಡಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ಬಳಿಕ ಹೋಬಳಿ ವ್ಯಾಪ್ತಿಯಲ್ಲಿ ಬೀಟ್ ಪೊಲೀಸರನ್ನು ನೇಮಿಸಲಾಗಿದೆ.
ಸಾದಿಕ್ ಪಾಷಾ, ಪೊಲೀಸ್ ಇನ್‌ಸ್ಪೆಕ್ಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net