ರೈತರ ಕಬ್ಬಿನ ಬಿಲ್ ಬಾಕಿ; ಕಾರ್ಖಾನೆ ಆಸ್ತಿ ಹರಾಜಿಗೆ ಮೌಲ್ಯಮಾಪನ ಸಮಿತಿ ರಚನೆ

DC T BHUBALAN
ಜಿಲ್ಲಾ ದಂಡಾಧಿಕಾರಿ ಟಿ.ಭೂಬಾಲನ್
Published on

ವಿಜಯಪುರ: ರೈತರಿಂದ ಕಬ್ಬು ಪಡೆದು ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಬಬಲೇಶ್ವರ ತಾಲೂಕಿನ ಕಾರಜೋಳ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆಯ ಚರ-ಸ್ಥಿರಾಸ್ಥಿಗಳನ್ನು ಹರಾಜು ಹಾಕಿ ರೈತರ ಬಾಕಿ ಹಣ ಪಾವತಿ ಮಾಡಲು ಸಕ್ಕರೆ ಕಾರ್ಖಾನೆಯನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಲು ವಿಜಯಪುರ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ 10 ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.

ಬಬಲೇಶ್ವರ ತಾಲೂಕಿನ ಬಸವೇಶ್ವರ ಶುಗರ್ಸ್ ಕಾರಜೋಳ ಸಕ್ಕರೆ ಕಾರ್ಖಾನೆಯವರು ಕಳೆದ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಂದ ಕಬ್ಬು ಪಡೆದು, ನುರಿಸಿ ಇನ್ನೂ 48 ಕೋಟಿ ರೂ. ಹಣವನ್ನು ರೈತರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದರಿಂದ ಸಕ್ಕರೆ (ನಿಯಂತ್ರಣ) ಆದೇಶ 1966ರ ಮತ್ತು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕಾರ ಜಿಲ್ಲಾಧಿಕಾರಿಗಳ ವರದಿ ಮೇರೆಗೆ ಬಾಕಿ ವಸೂಲಾತಿ ಮಾಡಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಆದೇಶ ಹೊರಡಿಸಿದ್ದರು.

ಆದೇಶಾನುಸಾರ ಬಸವೇಶ್ವರ ಶುಗರ್ಸ್ ಕಾರಜೋಳ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದ ಆಸ್ತಿಗಳ ಭೂ ದಾಖಲೆಗಳಲ್ಲಿ ರೈತರಿಗೆ ನೀಡಬೇಕಾಗಿರುವ ಬಾಕಿ ಹಣದ ಕುರಿತು ಬೋಜಾ ದಾಖಲಿಸಲು ಬಬಲೇಶ್ವರ ತಹಸೀಲ್ದಾರ್‌ರಿಗೆ ಸೂಚಿಲಾಗಿತ್ತು. ಸೂಚನೆಯನುಸಾರ ತಹಸೀಲ್ದಾರ್‌ರು ಸಕ್ಕರೆ ಕಾರ್ಖಾನೆಯ ದಾಖಲೆಗಳಲ್ಲಿ ಬೋಜಾ ನಮೂದಿಸಿದ್ದಾರೆ. ಅದಾಗ್ಯೂ ಸದರಿ ಕಾರ್ಖಾನೆಯವರು ರೈತರಿಗೆ ಬಾಕಿ ಹಣವನ್ನು ಸಂದಾಯ ಮಾಡದೇ ಇರುವುದರಿಂದ ಮೌಲ್ಯಮಾಪನ ಸಮಿತಿ ರಚಿಸಲಾಗಿದ್ದು, ಈ ತಂಡ ನೀಡುವ ಮೌಲ್ಯಮಾಪನ ವರದಿಯನ್ವಯ ಹರಾಜು ಪ್ರಕ್ರಿಯೆಯನ್ನು ಕೈಗೊಂಡು ರೈತರ ಬಾಕಿ ಹಣವನ್ನು ಸಂದಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net