

ಬೆಳಗಾವಿ: ಮಹಾಕುಂಭ ಮೇಳಕ್ಕೆ ಹೋಗಿ ಬರುತ್ತಿದ್ದಾಗ ಬೆಳಗಾವಿಯ ನಾಲ್ವರು ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದು ಕಾಂಗ್ರೆಸ್ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಸಚಿವೆ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಗಣೇಪುರಕ್ಕೆ ಧಾವಿಸಿ ಮೃತರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಮೃತದೇಹಗಳನ್ನು ತರುವುದು ಸೇರಿ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ 50 ಜನ ಮಹಾಕುಂಭ ಮೇಳಕ್ಕೆ ತೆರಳಿದ್ದರು. ಈ ಪೈಕಿ ಒಂದು ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೆ ಮೃತರಾಗಿ, 16 ಮಂದಿಗೆ ಗಾಯಗಳಾಗಿವೆ. ಮಧ್ಯಪ್ರದೇಶದ ಇಂದೋರ ಆಸ್ಪತ್ರೆಯಲ್ಲಿ ಮೃತದೇಹಗಳಿದ್ದು, ಜಿಲ್ಲಾಡಳಿತ ಹಾಗೂ ಇಂದೋರ್ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಮೃತ ದೇಹಗಳನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಒಂದು ಮೃತ ದೇಹವನ್ನು ಇಂದೋರ್‌ನಿಂದ ಬೆಳಗಾವಿಗೆ ತರಲು 95 ಸಾವಿರ ರೂ. ಖರ್ಚಾಗಲಿದೆ. ಲಕ್ಷ್ಮೀ ತಾಯಿ ಫೌಂಡೇಷನ್‌ನಿಂದ ನೆರವು ನೀಡಲಾಗುವುದು ಎಂದು ಮೃಣಾಲ್ ತಿಳಿಸಿದರು.