

ಗೋಕರ್ಣ: ಮಳೆಯ ಆರ್ಭಟ ಜೋರಾಗಿದ್ದರಿಂದ ಪಟ್ಟಣದ ಮುಖ್ಯ ಹಳ್ಳ ಸೇರಿದಂತೆ ಗಟಾರಗಳೆಲ್ಲ ತುಂಬಿ ಹರಿಯುತ್ತಿವೆ.
ಸಂಗಮ ನಾಲೆಯ ಮೂಲಕ ಮಹಾಬಲೇಶ್ವರ ಮಂದಿರದ ಗರ್ಭ ಗುಡಿಗೆ ಕೊಳಚೆ ನೀರು ಹೋಗುವ ಸಾಧ್ಯತೆ ಇದ್ದಿದ್ದರಿಂದ, ಕಾರ್ಯಾಚರಣೆ ಕೈಗೊಂಡು ಮಳೆ ನೀರು ಸರಾಗವಾಗಿ ಸಮುದ್ರ ಸೇರುವಂತೆ ವ್ಯವಸ್ಥೆ ಮಾಡಲಾಯಿತು.
ಗೋಕರ್ಣವನ್ನು ಸುತ್ತುವರಿದಿರುವ ಸಹ್ಯಾದ್ರಿ ಪರ್ವತದ ಮಳೆ ನೀರು ಹಳ್ಳ ಮತ್ತು ಗಟಾರಗಳ ಮೂಲಕ ಅಂತಿಮವಾಗಿ ಪುರಾಣ ಖ್ಯಾತ ಮಹಾಬಲೇಶ್ವರ ಮತ್ತು ಇತರ ಮಂದಿರಗಳ ಎದುರಿನ ಸಮುದ್ರ ಬಳಿಯ ಸಂಗಮ ನಾಲೆಯನ್ನು ಸೇರುತ್ತದೆ.
ಆದರೆ, ಬೇಸಿಗೆಯಲ್ಲಿ ಮರಳಿನ ರಾಶಿ ಸಂಗ್ರಹವಾಗಿ ಭಾರಿ ಪ್ರಮಾಣದ ಮಳೆ ನೀರು ಸರಾಗವಾಗಿ ಸಮುದ್ರ ಸೇರಲಾಗದೆ ಅದೇ ಹಳ್ಳಗಳ ಮೂಲಕ ತಿರುಗಿ ಊರನ್ನು ಸೇರುವಂತಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಸಂಗಮವನ್ನು ಸೇರುವ ಊರಿನ ಎಲ್ಲ ಪ್ರಕಾರದ ಕೊಳಚೆ ನೀರು ಕೂಡ ತಿರುಗಿ ಊರಿನತ್ತ ಹರಿದು ಬರುವಾಗ ಸಂಗಮ ನಾಲೆಗೆ ಹೊಂದಿಕೊಂಡಿರುವ ಶ್ರೀಮಹಾಬಲೇಶ್ವರ ಮಂದಿರದ ಸೋಮಸೂತ್ರ ನಾಲೆ ಮೂಲಕ ಗರ್ಭಗುಡಿಗೆ ನುಗ್ಗಿ ಆತ್ಮಲಿಂಗ ನೀರಲ್ಲಿ ಮುಳುಗುವಂತೆ ಮಾಡುತ್ತದೆ.
ಶುಕ್ರವಾರ ಸುರಿದ ಭಾರಿ ಮಳೆಗೆ ನಾಲೆ ನೀರು ಸಮುದ್ರ ಸೇರದೆ ಗರ್ಭಗುಡಿಯನ್ನು ಕೆಲ ಹೊತ್ತು ಆಕ್ರಮಿಸುವಂತಾಯಿತು.
ತಕ್ಷಣ ಕಾರ್ಯ ಪ್ರವೃತ್ತರಾದ ಮಂದಿರದ ಸಿಬ್ಬಂದಿ ಪಂಪ್ ಬಳಸಿ ಗರ್ಭಗುಡಿಯ ನೀರನ್ನು ಹೊರ ಹೋಗುವಂತೆ ನೋಡಿಕೊಂಡು ಆತ್ಮಲಿಂಗ ಮಲಿನವಾಗುವುದನ್ನು ತಡೆದರು.
ಸ್ಥಳೀಯ ಪಂಚಾಯಿತಿ ಕಾರ್ಯದರ್ಶಿ ವಿನಾಯಕ ಸಿದ್ದಾಪುರ ಮತ್ತು ಸಿಬ್ಬಂದಿ ಹಿಟಾಚಿ ಯಂತ್ರದ ಮೂಲಕ ಮರಳು ತೆಗೆದು ಮಳೆ ನೀರು ಸಮುದ್ರಕ್ಕೆ ಹೋಗಲು ವ್ಯವಸ್ಥೆ ಮಾಡಿದರು.
ಊರ ಪ್ರವೇಶ ದ್ವಾರದ ಭದ್ರಕಾಳಿ ಕಾಲೇಜ್ ಬಳಿ ಖಾಸಗಿಯವರು ತಮ್ಮ ಜಾಗದಿಂದ ಮಣ್ಣು ಹೊರಸಾಗಿಸಲು ಗಟಾರ ಮುಚ್ಚಿದ್ದರಿಂದ ಗುಡ್ಡದ ಅಂಟಾದ ಕೆಂಪು ಮಣ್ಣು ಮುಖ್ಯ ರಸ್ತೆಯ ತುಂಬ ಹರಡಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿ ಅಪಘಾತಕ್ಕೆ ಕಾರಣವಾಗಿತ್ತು. ಪಂಚಾಯಿತಿ ಸಿಬ್ಬಂದಿ ಸುರಕ್ಷಿತ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಈ ಮಧ್ಯೆ ಎರಡು-ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಭಾನುವಾರ ಮಧ್ಯಾಹ್ನದಿಂದ ಸ್ವಲ್ಪ ಬಿಡುವು ನೀಡಿದೆ.