

ಧಾರವಾಡ: ಯುದ್ಧಪೀಡಿತ ಯೂಕ್ರೇನ್ನಲ್ಲಿ ಸಿಲುಕಿರುವ ನಗರದ ವಿದ್ಯಾರ್ಥಿನಿ ಫೌಜಿಯಾ ಮುಲ್ಲಾ, ಬೆಂಗೇರಿ ಮೂಲದ ನಾಜಿಲ್ಲಾ ಬಾಬಾಜಾನ್ ಗಾಜಿಪುರ ಹಾಗೂ ಕುಂದಗೋಳ ತಾಲೂಕಿನ ಯರಗುಪ್ಪಿ ಮೂಲದ ಚೈತ್ರಾ ಸಂಶಿ ನಿವಾಸಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬುಧವಾರ ಭೇಟಿ ನೀಡಿದರು.
ನಗರದ ಮಾಳಾಪೂರ ನಿವಾಸಿ ಮಹಮ್ಮದ್ ಇಸಾಕ್ ಮುಲ್ಲಾ ಅವರ ಮಗಳು ಫೌಜಿಯಾ ಯೂಕ್ರೇನ್ನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಪಾಟೀಲ ಅವರು, ಫೌಜಿಯಾ ತಂದೆಯೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
ಫೌಜಿಯಾ ಈಗಾಗಲೇ ರೋಮೇನಿಯಾ ರಾಜಧಾನಿ ಬುಕಾರೆಸ್ಟ್ ನಗರದ ವಿಮಾನ ನಿಲ್ದಾಣ ತಲುಪಿದ್ದು, ಭಾರತಕ್ಕೆ ಮರಳಲು ಸಜ್ಜಾಗಿದ್ದಾರೆ. ಏರ್ಲಿಫ್ಟ್ಗಾಗಿ ಕಾದಿದ್ದು, ಅಲ್ಲಿಂದ ದೆಹಲಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಮನೆಗೆ ಕರೆತರುವುದು ಜಿಲ್ಲಾಡಳಿತದ ಜವಾಬ್ದಾರಿ. ಅಲ್ಲಿಯವರೆಗೆ ಸಮಾಧಾನದಿಂದ ಕಾಯಿರಿ ಎಂದು ಜಿಲ್ಲಾಧಿಕಾರಿಗಳು ಕುಟುಂಬ ವರ್ಗದವರಿಗೆ ಧೈರ್ಯ ನೀಡಿದರು.
ಚೈತ್ರಾ, ನಾಜಿಲ್ಲಾ ನಿವಾಸಕ್ಕೂ ಭೇಟಿ: ಚೈತ್ರಾ ಹಾಗೂ ನಾಜಿಲ್ಲಾ ಪಾಲಕರೊಂದಿಗೆ ವಿದ್ಯಾರ್ಥಿಗಳ ಪರಿಸ್ಥಿತಿ ಕುರಿತು ರ್ಚಚಿಸಿದರು. ಈ ಬಗ್ಗೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳುವ ಕುರಿತು ಭರವಸೆ ನೀಡಿದರು. ಧಾರವಾಡ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳೂ ಸುರಕ್ಷಿತವಾಗಿ ಭಾರತಕ್ಕೆ ಬರುತ್ತಾರೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ವಾಯುಸೇನೆಯ ವಿಮಾನಗಳನ್ನೂ ವ್ಯವಸ್ಥೆ ಮಾಡಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ. ಗೋಪಾಲಕೃಷ್ಣ, ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಕಂದಾಯ ಇಲಾಖೆ ಮತ್ತು ಪಾಲಿಕೆ ಸಿಬ್ಬಂದಿ ಇದ್ದರು.
ಪೋಲ್ಯಾಂಡ್ ಕಡೆಗೆ ಹೊರಟಿದ್ದಾರೆ: ರ್ಕಾವ್ ನಗರದಿಂದ 500ಕ್ಕೂ ಹೆಚ್ಚು ಜನ ಬುಧವಾರ ರೈಲಿನ ಮೂಲಕ ಯೂಕ್ರೇನ್ ಗಡಿ ಭಾಗದ ಪೋಲ್ಯಾಂಡ್ ಕಡೆಗೆ ಹೊರಟಿದ್ದಾರೆ. ಅದರಲ್ಲಿ ನಮ್ಮ ಮಗಳು ಚೈತ್ರಾ ಕೂಡ ಇದ್ದಾಳೆ. ರ್ಕಾವ್ನಿಂದ ಅಂದಾಜು 1000 ಕಿ.ಮೀ. ದೂರದ ಕೀವ್ ನಗರಕ್ಕೆ ತಲುಪಿ, ಅಲ್ಲಿಂದ 70 ಕಿ.ಮೀ. ದೂರದ ಪೋಲ್ಯಾಂಡ್ ಗಡಿ ಭಾಗಕ್ಕೆ ಬಸ್ ಮುಖಾಂತರ ತೆರಳಲಿದ್ದಾರೆ. ಅಲ್ಲಿಂದ ಭಾರತೀಯ ವಿಮಾನಗಳ ಮೂಲಕ ದೆಹಲಿಗೆ ಬರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಚೈತ್ರಾ ತಂದೆ ಗಂಗಾಧರ ಸಂಶಿ ಪತ್ರಿಕೆಗೆ ತಿಳಿಸಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿ ಸುರಕ್ಷಿತ:ಯೂಕ್ರೇನ್ನಲ್ಲಿ ಎಂಬಿಬಿಎಸ್ ಓದುತ್ತಿರುವ ಧಾರವಾಡ ಸಾರಸ್ವತಪುರದ ಮಿಲನ್ ದೇವಮಾನೆ ಎಂಬುವವರು ಸುರಕ್ಷಿತವಾಗಿದ್ದಾಗಿ ಸಹೋದರ ಅನಂತಗೆ ಮಂಗಳವಾರ ರಾತ್ರಿ ಸಂದೇಶ ಕಳುಹಿಸಿದ್ದಾರೆ.
ಅಥಣಿ ಮೂಲದ ಮಿಲನ್ ದೇವಮಾನೆ ಕುಟುಂಬ ಸದ್ಯ ಇಲ್ಲಿನ ಸಾರಸ್ವತಪುರದಲ್ಲಿ ನೆಲೆಸಿದೆ. ಮಿಲನ್ ಝುಾಫೋರಿಝಿಯಾ ಸ್ಟೇಟ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಯುದ್ಧ ಆರಂಭವಾದ ನಂತರ ಮಿಲನ್ ಸಾವಿರಾರು ಕಿ.ಮೀ. ರೈಲು ಪ್ರಯಾಣದ ಮೂಲಕ ಹಂಗೇರಿಯಾ ತಲುಪಿದ್ದಾರೆ. ಸದ್ಯ ಹಂಗೇರಿಯಾ ಗಡಿಯಲ್ಲಿದ್ದು, ಸುರಕ್ಷಿತವಾಗಿರುವುದಾಗಿ ಸಹೋದರನಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ. ಮಿಲನ್ ಉಕ್ರೇನ್ನಲ್ಲಿದ್ದಾಗ ಆತಂಕವಿತ್ತು. ಈಗ ಕೊಂಚ ಸಮಾಧಾನವಾಗಿದೆ ಎಂದು ಅನಂತ ದೇವಮಾನೆ ಹೇಳಿದ್ದಾರೆ.