ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಆಯೋಜನೆ

HanagaL Tahasildar S.Renuka
Published on

ಹಾನಗಲ್ಲ: ಗ್ಯಾರಂಟಿ ಯೋಜನೆಗಳ ಹಾನಗಲ್ಲ ತಾಲೂಕಿನ ಫಲಾನುಭವಿಗಳ ಸಮಾವೇಶವನ್ನು ಮೂರು ಹೋಬಳಿಗಳಲ್ಲಿ ಫೆ. 9, 17 ಹಾಗೂ 26ರಂದು ಹಮ್ಮಿಕೊಳ್ಳಲಾಗಿದ್ದು, ತಾಂತ್ರಿಕ ಸಮಸ್ಯೆಗಳಿಂದಾಗಿ ಇದುವರೆಗೂ ಸೌಲಭ್ಯ ಪಡೆಯದಿರುವವರಿಗೆ ಅದೇ ದಿನ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಿ ನೋಂದಾಯಿಸಲಾಗುವುದು ಎಂದು ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಹು ಮಹತ್ವಾಕಾಂಕ್ಷಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಇದಾಗಿದೆ. ತಾಲೂಕಿನ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುವರು ಎಂದರು.

ಸಮಾವೇಶದ ಸಂದರ್ಭದಲ್ಲಿ ಪ್ರತಿಯೊಂದು ಗ್ಯಾರಂಟಿ ಯೋಜನೆಗಳ ಪ್ರತ್ಯೇಕ ಕೌಂಟರ್ ತೆರೆಯಲಾಗುತ್ತಿದ್ದು, ಫಲಾನುಭವಿಗಳು ಸಮಸ್ಯೆ ಪರಿಹರಿಸಿಕೊಳ್ಳಲು ಅಲ್ಲಿಯೇ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಫಲಾನುಭವಿಗಳಿಗೆ ಸೌಲಭ್ಯ ದೊರೆಯದಿದ್ದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಳ್ಳಬಹುದಾಗಿದೆ. ತಾಲೂಕಿನಲ್ಲಿ ಯಾವುದೇ ಫಲಾನುಭವಿಯೂ ಗ್ಯಾರಂಟಿ ಸೌಲಭ್ಯದಿಂದ ಹೊರಗುಳಿಯಬಾರದು ಎಂಬ ಉದ್ದೇಶ ಇಲಾಖೆಯದಾಗಿದೆ. ಈ ಕುರಿತು ಜನಜಾಗೃತಿ ಮೂಡಿಸಿ ಎಲ್ಲ ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಲು ಆಯಾ ಇಲಾಖೆಗಳು ಮುಂದಾಗಿವೆ ಎಂದು ರೇಣುಕಾ ವಿವರಿಸಿದರು.

ತಾಲೂಕಿನ ಮೂರು ಹೋಬಳಿಗಳಲ್ಲಿ ಪ್ರತ್ಯೇಕ ಸಮಾವೇಶಗಳು ನಡೆಯಲಿವೆ. ಅಕ್ಕಿಆಲೂರ ಹೋಬಳಿಯ ಸಮಾವೇಶ ಅಕ್ಕಿಆಲೂರಿನ ಎನ್‌ಡಿಪಿಯು ಕಾಲೇಜ್ ಆವರಣದಲ್ಲಿ ಫೆ. 9ರಂದು ಸಂಜೆ 4 ಗಂಟೆಗೆ ಜರುಗಲಿದೆ. ಹಾನಗಲ್ಲ ಹೋಬಳಿಯ ಸಮಾವೇಶ ಜನತಾ ಶಿಕ್ಷಣ ಸೌಹಾರ್ದ ಸಂಘದ ಕುಮಾರೇಶ್ವರ ಕಲಾ-ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಫೆ. 17ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಬೊಮ್ಮನಹಳ್ಳಿ ಹೋಬಳಿಯ ಸಮಾವೇಶ ಮಹರಾಜಪೇಟೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಫೆ. 26ರಂದು ಸಂಜೆ 4ಕ್ಕೆ ನೆಯಲಿದೆ. ಆಯಾ ಹೋಬಳಿಗಳ ಫಲಾನುಭವಿಗಳು ಆಯಾ ಹೋಬಳಿಯ ಸಮಾವೇಶದಲ್ಲಿ ಪಾಲ್ಗೊಂಡು ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಅವಕಾಶವಿದೆ. ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕಗಳು ಕೂಡ ಪ್ರದರ್ಶನಗೊಳ್ಳಲಿವೆ ಎಂದು ತಹಸೀಲ್ದಾರ್ ಎಸ್.ರೇಣುಕಾ ತಿಳಿಸಿದರು.

ಫೋಟೋ 6 ಎಚ್‌ಎನ್‌ಎಲ್ 1
ಎಸ್. ರೇಣುಕಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net