

ಮುದಗಲ್: ಗಿಡಮರಗಳನ್ನು ಕಡಿದು ಪ್ರಾಣಿ-ಪಕ್ಷಿಗಳ ಸಂಕುಲಕ್ಕೆ ಅನನುಕೂಲ ಮಾಡದೆ ಪ್ರಕೃತಿ ಸಂಪತ್ತು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಿಂಧನೂರಿನ ವನಸಿರಿ ಫೌಂಡೇಷನ್ ಮುಖ್ಯಸ್ಥ ಅಮರೇಗೌಡ ಮಲ್ಲಾಪುರ ಅಭಿಪ್ರಾಯಪಟ್ಟರು.
ಇಲ್ಲಿನ ಆರ್.ಕೆ.ನಗರದಲ್ಲಿ ಭಾನುವಾರ ವನಸಿರಿ ಫೌಂಡೇಷನ್ ಹಾಗೂ ಆರ್.ಕೆ.ನಗರದ ಯುವ ಬಳಗದ ಸಹಯೋಗದಲ್ಲಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟಿಗೆ ನಿರ್ಮಾಣ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಬಡಾವಣೆಯಲ್ಲಿ ಬೇಸಿಗೆ ಕಾಲದಲ್ಲಿ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲು ಗಿಡ ಮರಗಳಲ್ಲಿ ನೀರಿನ ವ್ಯವಸ್ಥೆ ಮಾಡಬೇಕು. ನಾಗರಿಕರು ಸಮರ್ಪಕವಾಗಿ ನೀರು ಹಾಕಿ ನಿರ್ವಹಣೆ ಮಾಡಿ ಪಕ್ಷಿ ಸಂಕುಲಕ್ಕೆ ಅನುಕೂಲ ಮಾಡುವಂತೆ ಸಲಹೆ ನೀಡಿದರು.
ಕಸಾಪ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗೌಡರ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಬಡಾವಣೆ ಸುತ್ತಲೂ ಗಿಡಗಳಲ್ಲಿ ಪಕ್ಷಿಗಳಿಗಾಗಿ ನೀರಿನ ಅರವಟಿಗೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು. ಪ್ರಮುಖರಾದ ಚನ್ನಬಸವ ಚುಕನಟ್ಟಿ, ಷಣ್ಮುಖಪ್ಪ ಚಲುವಾದಿ, ಶಿವು ಕುಂಬಾರ, ಯಮನೂರ್ ನದಾಫ್, ಆದೇಶ, ರಾಜು ಬಳಗಾನೂರು, ಚನ್ನಪ್ಪ ಕೆ.ಹೊಸಳ್ಳಿ, ಮುದುಕಪ್ಪ ಹೊಸಳ್ಳಿ ಇತರರಿದ್ದರು.