ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಕ್ರಮವಹಿಸಿ

Ne w Lokayukta New5654
Published on

ಹುಬ್ಬಳ್ಳಿ : ಮಾಹಿತಿ ಹಕ್ಕು ಹಾಗೂ ಸಕಾಲ ಯೋಜನೆಗಳ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸಲ್ಲಿಸಬಹುದು. ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಶೀಘ್ರದಲ್ಲಿಯೇ ಅಧಿಕಾರಿಗಳು ವಿಲೇವಾರಿ ಮಾಡಬೇಕು ಎಂದು ಲೋಕಾಯುಕ್ತದ ಪೊಲೀಸ್ ಅಧೀಕ್ಷಕ ಶಂಕರ ರಾಗಿ ಹೇಳಿದರು.

ಇಲ್ಲಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಭವನದಲ್ಲಿ ಕರ್ನಾಟಕ ಲೋಕಾಯುಕ್ತ ಧಾರವಾಡ, ಹುಬ್ಬಳ್ಳಿ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರಿನಲ್ಲಿ ಯಾವುದೇ ತರಹದ ಕಲಬೆರಕೆಯಾಗಬಾರದು. ನೀರಿನ ಟ್ಯಾಂಕರ್​ಗಳನ್ನು ಶುಚಿಗೊಳಿಸಬೇಕು. ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕಾಗಿದೆ. ತ್ವರಿತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಉಪ ಪೊಲೀಸ್ ಅಧೀಕ್ಷಕ ವೆಂಕನಗೌಡ ಪಾಟೀಲ ಮಾತನಾಡಿ, ಸಸ್ಯ ಶ್ಯಾಮಲಾ ಯೋಜನೆ ಮೂಲಕ ಸಸಿಗಳನ್ನು ನೆಡುವುದಷ್ಟೇ ಅಲ್ಲ, ಅವುಗಳ ಸಂರಕ್ಷಣೆ ಮಾಡಬೇಕು. ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಅರ್ಜಿಗಳನ್ನು ನೀಡಲು ಬಂದರೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಆ ಅರ್ಜಿಗಳಿಗೆ ಕಡ್ಡಾಯವಾಗಿ ಸ್ವೀಕೃತಿಯನ್ನು ನೀಡಬೇಕು ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ವಿುಸಿ, ಅವುಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆಗಾಲ ಶುರುವಾಗಿದ್ದರಿಂದ ಸರ್ಕಾರಿ ಶಾಲೆಗಳ ಮೇಲ್ಪಾವಣಿಯನ್ನು ದುರಸ್ಥಿಗೊಳಿಸಬೇಕಾಗಿದೆ. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರೀಕ್ಷಿಸಿ, ನೀಡಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕರಿಂದ ಒಟ್ಟಾರೆ 6 ಅರ್ಜಿಗಳು ಸ್ವೀಕೃತಗೊಂಡಿವೆ. ಅವುಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಪ್ರಭುಲಿಂಗ ಹಿರೇಮಠ, ಕರುಣೇಶಗೌಡ ಜಿ., ಹುಬ್ಬಳ್ಳಿ ಶಹರ ತಹಶೀಲ್ದಾರ ಕಲಗೌಡ್ ಪಾಟೀಲ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ಹುಬ್ಬಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net