

ಸಿರಗುಪ್ಪ: ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಪ್ರಯಾಣಿಕರು ಶನಿವಾರ ಬಸ್ ನಿಲ್ದಾಣದ ಮುಂದಿನ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಪ್ರತಿದಿನ ಸಂಜೆ 4ಗಂಟೆ ಆಗುತ್ತಿದಂತೆ ಬಸ್‌ಗಳು ಬರುವುದಿಲ್ಲ. ರಾತ್ರಿ 8-9ಗಂಟೆ ವರೆಗೆ ಕಾಯುವ ಪರಿಸ್ಥಿತಿ ಬಂದಿದೆ. ದೂರದ ಗ್ರಾಮ, ನಗರ ಪ್ರದೇಶಗಳಿಗೆ ಹೋಗಬೇಕಾದರೆ ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಪರದಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 2 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಪ್ರತಿಭಟನಾಕಾರರ ಮನವೊಲಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.