ಏಪ್ರಿಲ್‍ನಿಂದ ಸರ್ಕಾರಿ ನೌಕರರಿಗೆ ಆರೋಗ್ಯ ಸಿರಿ ಯೋಜನೆ: ದೇವೇಂದ್ರ

Devendra
Published on

ಚಿಕ್ಕಮಗಳೂರು: ಮುಂದಿನ ಏಪ್ರಿಲ್ ಒಂದರಿಂದ ರಾಜ್ಯದ 5.40 ಲಕ್ಷ ನೌಕರರಿಗೆ ಆರೋಗ್ಯ ಸಿರಿ ಯೋಜನೆಯಡಿ ಚಿಕಿತ್ಸಾ ಸೌಲಭ್ಯ ನೀಡಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಇದರಿಂದ ನೌಕರರು ಸೇರಿ ಅವರ ಅವಲಂಬಿತ ಕುಟುಂಬದ 20 ಲಕ್ಷ ಸದಸ್ಯರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ನೌಕರರ ಪರವಾಗಿ ಸಾಕಷ್ಟು ಹೋರಾಟ, ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವರ ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ. ಶಿಕ್ಷಕರು ಸಹ ಅವರ ಕೈಬಲಪಡಿಸಬೇಕು. ಜಿಲ್ಲೆಯ 8 ವಲಯಗಳಲ್ಲಿ ಸಂಘದ ಬೆಂಬಲಿತ ಪ್ರತಿನಿಧಿಗಳ ನೇತೃತ್ವದಲ್ಲಿ ಶಿಕ್ಷಕರ ಸಂಘಕ್ಕೆ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅವರನ್ನು ಗೆಲ್ಲಿಸುವ ಅವಶ್ಯಕತೆ ಇದೆ ಎಂದರು.

ಶವ ಸಂಸ್ಕಾರ ವೆಚ್ಚ ಹೆಚ್ಚುವರಿ ಮಂಜೂರು

ರಾಜ್ಯ ಸಂಘಕ್ಕೆ 100 ವರ್ಷ ತುಂಬುತ್ತಿದ್ದು, ಷಡಕ್ಷರಿ ನೇತೃತ್ವದ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ನೌಕರರ ಪರವಾದ ಹಲವಾರು ಆದೇಶಗಳನ್ನು ಸರ್ಕಾರದಿಂದ ಮಾಡಿಸಲಾಗಿದೆ. ಅನಾಮಧೇಯ ಪತ್ರಗಳಿಗೆ ಕಡಿವಾಣ ಹಾಕಿಸುವುದು, ಶವ ಸಂಸ್ಕಾರ ವೆಚ್ಚವನ್ನು 5 ರಿಂದ 15 ಸಾವಿರಕ್ಕೆ ಹೆಚ್ಚಿಸುವುದು, ಕೇಂದ್ರ ಸಂಘದ ಭವನಕ್ಕೆ 8.60 ಕೋಟಿ ರೂ. ಅನುದಾನ ಒದಗಿಸಿರುವುದು, ಡಯಾಲಿಸಿಸ್ ಅಗತ್ಯವಿರುವ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಲಭ್ಯವಾಗಿದೆ ಎಂದರು.

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತಂದಿರುವುದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸುವುದು, ಶಿಕ್ಷಕ ಪ್ರೇಮಿಯಾಗಿ ಶಿಕ್ಷಕರ ವರ್ಗಾವಣೆ ರೂಪಿಸಿರುವುದು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು 6 ರಿಂದ 10 ಜನಕ್ಕೆ ಹೆಚ್ಚಿಸಿರುವುದು, ನೌಕರರ ಪ್ರತಿಭಾವಂತ ಮಕ್ಕಳಿಗೆ ರಾಜ್ಯ ಸಂಘದಿಂದ ಪುರಸ್ಕಾರ, ಸರ್ಕಾರಿ ನೌಕರರ ದಿನಾಚರಣೆ ನಡೆಸುವುದು - ಹೀಗೆ ಹತ್ತು ಹಲವು ಕಾರ್ಯಗಳು ಅವುಗಳಲ್ಲಿ ಸೇರಿವೆ ಎಂದು ಹೇಳಿದರು.

ಜನಪ್ರತಿನಿಧಿಗಳಿಂದ ಕಟ್ಟಡಕ್ಕೆ 18 ಲಕ್ಷ ರೂ.

ಜಿಲ್ಲಾ ಸಂಘ ಕಳೆದ ಒಂದೂವರೆ ವರ್ಷದಲ್ಲಿ ಸಂಘದ ಖಾಲಿ ನಿವೇಶನದಲ್ಲಿ ಕಟ್ಟಡ ವಿಸ್ತರಿಸಲು ವಿವಿಧ ಚುನಾಯಿತ ಪ್ರತಿನಿಧಿಗಳಿಂದ 18 ಲಕ್ಷ ರೂ. ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ನೌಕರರಿಗೆ ವೈದ್ಯಕೀಯ ತಪಾಸಣೆ, ಬೃಹತ್ ರಕ್ತದಾನ ಶಿಬಿರ, ಲಾಕ್‍ಡೌನ್ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಹಣದಲ್ಲಿ ನಿರಾಶ್ರಿತರಿಗೆ ಊಟೋಪಚಾರ, ಸಾಯಿ ಇಂಟರ್‍ನ್ಯಾಷನಲ್ ಸೆಂಟರ್‍ನಿಂದ ನೌಕರರಿಗಾಗಿ ಶೇ.10 ರಿಯಾಯ್ತಿ ದರದ ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗಿದೆ. ಇದೀಗ ಸಂಘದ ಮುಂದೆ ಹಳೇ ಪಿಂಚಣಿ ಸ್ಕೀಂ ತೆಗೆಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಮಾಡುವುದು, ಜತೆಗೆ ಕೇಂದ್ರ ಸರ್ಕಾರಿ ಮಾದರಿ ವೇತನ ಒದಗಿಸುವ ಎರಡು ಸವಾಲುಗಳಿವೆ ಎಂದರು.

ಶಿಕ್ಷಕರ ಆಯ್ಕೆ ಸರ್ಕಾರಿ ನೌಕರರ ಸಂಘಕ್ಕೆ ಶಕ್ತಿ

ಡಿ.15 ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜಿಲ್ಲೆಯ ಒಟ್ಟು 87 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ. ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲಿತ ಶಿಕ್ಷಕರನ್ನು ಆರಿಸಿ ಕಳುಹಿಸಿದಲ್ಲಿ ಸಂಘಕ್ಕೆ ಇನ್ನಷ್ಟು ಶಕ್ತಿ ತುಂಬಿದಂತಾಗುತ್ತದೆ. ಇದರಿಂದ ಎನ್‍ಪಿಎಸ್ ಹೋಗಲಾಡಿಸುವುದು ಹಾಗೂ ಕೇಂದ್ರದ ಮಾದರಿಯಲ್ಲಿ ಶಿಕ್ಷಕರು ಸೇರಿದಂತೆ ಎಲ್ಲ ಸರ್ಕಾರಿ ನೌಕರರು ವೇತನ ಪಡೆಯಲು ನಡೆಸಲಾಗುತ್ತಿರುವ ಹೋರಾಟಕ್ಕೆ ಇನ್ನಷ್ಟು ಬಲ ದೊರಕಿದಂತಾಗಲಿದೆ ಎಂದರು.

ಸಂಘದ ಪದಾಧಿಕಾರಿಗಳಾದ ಓಂಕಾರಸ್ವಾಮಿ, ಬಡಿಗೇರ್, ಮಹೇಶ್ವರಪ್ಪ, ಎಸ್.ಟಿ.ಪೂರ್ಣೇಶ್, ಸಿದ್ದಮೂರ್ತಿ, ಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪರಮೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net