ಆರೋಗ್ಯಸೇತು ಆ್ಯಪ್ ಬಳಕೆಗೆ ಅಸಡ್ಡೆ

17-klr-3
Published on

ಪಿ.ಎಸ್.ಹರೀಶ್ ಕೋಲಾರ

ಕರೊನಾ ಸೋಂಕಿತರ ಕುರಿತು ಎಚ್ಚರಿಸುವ ಹಾಗೂ ಸೋಂಕಿನ ಮಾಹಿತಿ ನೀಡುವ ‘ಆರೋಗ್ಯ ಸೇತು’ ಆ್ಯಪ್ ಬಳಕೆಯಲ್ಲಿ ನಗರದಲ್ಲಿ ಅಸಡ್ಡೆ ಕಂಡುಬಂದಿದೆ.

ಕೇಂದ್ರದ ಎನ್‌ಐಸಿ ಬಿಡುಗಡೆ ಮಾಡಿರುವ ಆ್ಯಪ್ ಆಪ್ತ ರಕ್ಷಕವಾಗಿದೆ. ಲಾಕ್‌ಡೌನ್ ಸಡಿಲಿಕೆ ನಂತರ ಕೋಲಾರ ಕೆಂಪು ವಲಯಕ್ಕೆ ಜಾರಿ ಸೋಂಕಿತರ ಸಂಖ್ಯೆ ಅರ್ಧ ಶತಕದ ಸನಿಹದಲ್ಲಿರುವುದರಿಂದ ಜನ ಎಚ್ಚರಿಕೆಯಲ್ಲಿರಬೇಕು. ಅಂಡ್ರಾಯ್ಡಾ ಫೋನ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ ಆ್ಯಪ್ ಮಾಹಿತಿದಾರನಾಗಿ ಕಾರ್ಯನಿರ್ವಹಿಸಬಲ್ಲದು. ಆದರೆ ಇದನ್ನು ಬಳಸಲು ಸಾರ್ವಜನಿಕರು ಅಸಡ್ಡೆ ತೋರುತ್ತಿದ್ದಾರೆ.

ಜಿಲ್ಲೆಯ ಜನಸಂಖ್ಯೆ 17 ಲಕ್ಷ ಆಸುಪಾಸಿನಲ್ಲಿದೆ. ಕೋಲಾರ ನಗರದ ಜನಸಂಖ್ಯೆಯೇ 1.65 ಲಕ್ಷ ದಾಟಿದೆ. ಆದರೆ ಆರೋಗ್ಯ ಸೇತು ಬಳಸುವವರ ಸಂಖ್ಯೆ ತೀರಾ ವಿರಳ. ನಗರದಲ್ಲಿ ಬುಧವಾರಕ್ಕೆ ಅನ್ವಯಿಸುವಂತೆ 1 ಕಿಮೀ ವ್ಯಾಪ್ತಿಯಲ್ಲಿ 5027 ಜನರು ಅಪ್ಲಿಕೇಷನ್ ಬಳಸುತ್ತಿದ್ದರೆ, 2 ಕಿಮೀ ವ್ಯಾಪ್ತಿಯಲ್ಲಿ 11,544 ಜನ, 5 ಕಿಮೀ ವ್ಯಾಪ್ತಿಯಲ್ಲಿ 16,900 ಮಂದಿ ಬಳಸುತ್ತಿದ್ದಾರೆ. ನಗರಸಭೆ ವ್ಯಾಪ್ತಿಯ ಯಾವ ಮೂಲೆಯಿಂದ ಲೆಕ್ಕ ಹಾಕಿದರೂ 8 ಕಿಮೀ ಮೀರುವುದಿಲ್ಲ. ಬರೋಬ್ಬರಿ 10 ಕಿಮೀ ವ್ಯಾಪ್ತಿಯಲ್ಲಿ ಆ್ಯಪ್ ಬಳಕೆದಾರರ ಸಂಖ್ಯೆ 21,101 ಮಾತ್ರ.

ಮುಳಬಾಗಿಲು ಪಟ್ಟಣದಲ್ಲೂ 1 ಕಿಮೀ ವ್ಯಾಪ್ತಿಯಲ್ಲಿ 2270 ಜನ, 2 ಕಿಮೀ ವ್ಯಾಪ್ತಿಯಲ್ಲಿ 4319 ಜನ ಆ್ಯಪ್ ಬಳಸಿದರೆ 10 ಕಿಮೀ ವ್ಯಾಪ್ತಿಯಲ್ಲಿ 7787 ಬಳಕೆದಾರರಿದ್ದಾರೆ.

ಜನರಲ್ಲಿ ಕರೊನಾ ಬಗ್ಗೆ ಈಗ ಭಯ ಇದ್ದಂತಿಲ್ಲ. ದೈಹಿಕ ಅಂತರ ಪಾಲನೆ ಇಲ್ಲ, ಮಾಸ್ಕ್ ರಹಿತವಾಗಿ ಓಡಾಟ ಕಂಡುಬರುತ್ತಿದ್ದು, ಇಂತಹ ಸಂದರ್ಭದಲ್ಲಿ ಆ್ಯಪ್ ಬಳಕೆ ಅಪ್ಯಾಯಮಾನವಾಗಿ ಕಾಣಬೇಕಿತ್ತು. ಅಂತಹ ಲಕ್ಷಣ ಕಾಣುತ್ತಿಲ್ಲ.

ಗ್ರಾಮೀಣ ಭಾಗದಲ್ಲಿ ಪರಿಸ್ಥಿತಿ ಇದಕ್ಕಿಂತಲೂ ಕಡೆಯಾಗಿರುತ್ತದೆ, ಮಾಹಿತಿ ಕೊರತೆಯೂ ಇರಬಹುದು. ಆದರೆ ಅಕ್ಷರಸ್ಥರಿಗೆ ಕರೊನಾ ಬಗ್ಗೆ ಸಂಪೂರ್ಣ ಅರಿವಿದೆ, ನಗರದಲ್ಲಿ ವಾಸವಿರುವ ಸರ್ಕಾರಿ, ಖಾಸಗಿ ಕಂಪನಿ, ಕೈಗಾರಿಕೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳೇ ಆ್ಯಪ್ ಬಳಸಿದ್ದರೂ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು. ಅಸಡ್ಡೆತನ ಪ್ರಮುಖ ಕಾರಣವಾದರೆ ಆ್ಯಪ್ ಕಾರ್ಯಾಚರಣೆಗೆ ಅಂಡ್ರಾಯ್ಡಾ ಮೊಬೈಲ್ ಹೊಂದಿರಬೇಕಿರುವುದೂ ಹಿನ್ನಡೆಗೆ ಸ್ವಲ್ಪ ಮಟ್ಟಿನ ಕಾರಣವಾಗಿರಬಹುದು.

ಆರೋಗ್ಯ ಇಲಾಖೆಯಲ್ಲಿ ಹೇಗೆ: ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಬಹುತೇಕರು ಆ್ಯಪ್ ಬಳಸುತ್ತಿದ್ದಾರೆ. ವಿದೇಶ, ಹೊರರಾಜ್ಯದಿಂದ ಜಿಲ್ಲೆಗೆ ಬರುವವರು, ಕರೊನಾ ಶಂಕೆ ಹಿನ್ನೆಲೆಯಲ್ಲಿ ಕ್ವಾರಂಟೈನ್‌ಗೆ ಒಳಪಟ್ಟವರು, ಸೋಂಕಿತರಿಗೆ ಕಡ್ಡಾಯವಾಗಿ ಆ್ಯಪ್ ಡೌನ್‌ಲೋಡ್ ಮಾಡಿಕೊಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಜಗದೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎಷ್ಟು ಮಂದಿ ಆ್ಯಪ್ ಬಳಸುತ್ತಿದ್ದಾರೆ ಎಂಬ ಬಗ್ಗೆ ಹೇಳುವುದು ಕಷ್ಟ, ಆರೋಗ್ಯ ಇಲಾಖೆಯಲ್ಲಿ ಬಹುತೇಕ ಎಲ್ಲರೂ ಬಳಸುತ್ತಿದ್ದಾರೆ. ಗ್ರಾಮೀಣರಿಗೆ ಅರಿವು ಮೂಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಕರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಆ್ಯಪ್ ಬಳಸಬೇಕು. ಡಾ.ಎಸ್.ಎನ್. ವಿಜಯಕುಮಾರ್, ಡಿಎಚ್‌ಒ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net