೫೦ ಹೆಚ್ಚುವರಿ ಬೆಡ್‌ಗೆ ಪ್ರಸ್ತಾವನೆ - ಶಾಸಕ ಅಶೋಕ್ ರೈ ಮಾಹಿತಿ - ಪುತ್ತೂರು ಸರ್ಕಾರಿ ಆಸ್ಪತ್ರೆಗೆ ೨ ಕೋ. ರೂ. ಅನುದಾನ

PTR_19 JUN_3
Published on


ಪುತ್ತೂರು: ಆಸ್ಪತ್ರೆಯಲ್ಲಿ ನಾಲ್ವರು ವೈದ್ಯರ ಕೊರತೆ ಇದ್ದರೂ ಉಳಿದವರು ಉತ್ತಮ ಸೇವೆ ನೀಡುತ್ತಿದ್ದಾರೆ. ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಒಟ್ಟು ರೂ. ೨ ಕೋಟಿ ಅನುದಾನ ಬಂದಿದ್ದು, ಆಸ್ಪತ್ರೆಯ ಬೇಡಿಕೆಯಂತೆ ತುರ್ತು ೫೦ ಬೆಡ್ ಹೆಚ್ಚುವರಿ ಮಾಡಲು ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಆರೋಗ್ಯ ರಕ್ಷಾ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಪುತ್ತೂರಿನಲ್ಲಿ ಆಯುಷ್ ಆಸ್ಪತ್ರೆಗಾಗಿ ಈಗಾಗಲೇ ಎರಡು ಕಡೆ ಜಾಗ ನೋಡಲಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ೩೦೦ ಬೆಡ್‌ನ ಸ್ಪತ್ರೆಯಾಗಿ ಮೇಲ್ದದರ್ಜೆಗೆ ಏರಿಸಲು ಈ ಹಿಂದೆಯೇ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ನಮಗೆ ಮೆಡಿಕಲ್ ಕಾಲೇಜು ಆದರೆ ಬೆಡ್ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮೇಲ್ದರ್ಜೆಗೆ ಏರಿಸಲು ಸ್ವಲ್ಪ ಗೊಂದಲವಿದೆ. ಸೇಡಿಯಾಪು ಸಮೀಪ ೪೦ ಎಕರೆ ಜಾಗ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ಮೀಸಲು ಇರಿಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ರೂ. ೨೫೦ ಕೋಟಿ ಅನುದಾನ ಕೇಳಿದ್ದೇವೆ ಎಂದು ತಿಳಿಸಿದರು.


ಆಸ್ಪತ್ರೆಯ ಆಡಳಿತ ವೈದ್ಯಾಽಕಾರಿ ಡಾ. ಅಶಾ ಜ್ಯೋತಿ ಆಸ್ಪತ್ರೆಯ ಕುಂದುಕೊರತೆಯ ಕುರಿತು ಮಾಹಿತಿ ನೀಡಿದರು. ಡಾ.ಜಯದೀಪ್ ೨೦೨೩-೨೪ನೇ ವರ್ಷದ ಆದಾಯ ವೆಚ್ಚ ಮಂಡಿಸಿದರು.


ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮುಕೇಶ್ ಕೆಮ್ಮಿಂಜೆ ಜನನ ಪ್ರಮಾಣಪತ್ರ ತಿದ್ದುಪಡಿಯಲ್ಲಿ ತೊಂದರೆ ಆಗುತ್ತಿರುವ ಕುರಿತು ತಿಳಿಸಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಸುದೇಶ್ ಶೆಟ್ಟಿ, ಅಸ್ಕರ್ ಆನಂದ್, ಸಿದ್ಸಿಕ್ ಸುಲ್ತಾನ್, ವಿಕ್ಟರ್ ಪಾಯಸ್, ಅನ್ವರ್ ಕಬಕ ವಿವಿಧ ಸಲಹೆ ನೀಡಿದರು.


ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಹಸೀಲ್ದಾರ್ ಪುರಂದರ ಹೆಗ್ಡೆ, ಪೌರಾಯುಕ್ತ ಮಧು ಎಸ್ ಮನೋಹರ್, ತಾಲೂಕು ಆರೋಗ್ಯಾಽಕಾರಿ ಡಾ. ದೀಪಕ್ ರೈ, ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ಎಚ್ ಉಪಸ್ಥಿತರಿದ್ದರು. ತಾರಾನಾಥ ಕಾರ್ಯಕ್ರಮ ನಿರೂಪಿಸಿದರು.


ಸಾಂತ್ವನ ಕೇಂದ್ರ ದುರಸ್ತಿಗೆ ಸೂಚನೆ
ಮಹಿಳಾ ಸಾಂತ್ವನ ಕೇಂದ್ರ ನಾದುರಸ್ತಿಯಲ್ಲಿದೆ ಅದನ್ನು ಶೀಘ್ರವೇ ದುರಸ್ತಿ ಮಾಡಬೇಕು. ಅಲ್ಲಿಗೆ ಏನೆಲ್ಲ ವ್ಯವಸ್ಥೆಗಳು ಬೇಕೋ ಅದೆಲ್ಲವನ್ನೂ ಮಾಡಬೇಕು. ಆ ಕೇಂದ್ರದಲ್ಲಿ ಸಾಂತ್ವನ ನೀಡುವ ಮೂಲಕ ಯಾರಿಗಾದರೂ ಒಬ್ಬರಿಗೆ ಒಳ್ಳೆಯದಾದರೂ ಅದು ನಮಗೆ ಅತ್ಯಂತ ಸಂತೋಷದ ವಿಚಾರವಾಗಿದೆ. ವ್ಯವಸ್ಥೆ ಇಲ್ಲದೆ ಬಡವರು ತೊಂದರೆಗೊಳಗಾಗಬಾರದು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಸೂಚಿಸಿದರು. ವಿಜಯವಾಣಿ ಸಾಂತ್ವನ ಕೇಂದ್ರದ ದುರಾವಸ್ಥೆಯನ್ನು ಇತ್ತೀಚೆಗೆ ವರದಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net