

ಹರಿಹರ: ತಾಲೂಕಿನ ಆರೋಗ್ಯ ಮಾತೆ ಬಸಲಿಕಾ ಚರ್ಚ್ನ ಲೆಕ್ಕಪತ್ರ ನೀಡಲು ಹಾಗೂ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಚರ್ಚ್ ಪಾಲನಾ ಪರಿಷತ್ನ ಕೆಲ ಸದಸ್ಯರು, ಮುಖಂಡರು ಶಿವಮೊಗ್ಗದ ಕ್ರೈಸ್ತ ರೋಮನ್ ಕ್ಯಾಥೋಲಿಕ್ ಧರ್ವಧ್ಯಕ್ಷ ಬಿಷಪ್ ಪ್ರಾನ್ಸಿಸ್ ಸೆರಾವೊ ಅವರಿಗೆ ಶನಿವಾರ ಘೕರಾವ್ ಹಾಕಿದರು.
ಚರ್ಚ್ ಸಭಾಂಗಣದಲ್ಲಿ ಆಯೋಜಿಸಿದ್ದ ಪಾಲನಾ ಪರಿಷತ್ ಸಭೆಗೆ ಬಿಷಪ್ ಪ್ರಾನ್ಸಿಸ್ ಸೆರಾವೊ ಆಗಮಿಸುತ್ತಿದ್ದಂತೆ ಒಂದು ಗುಂಪು ಅವರಿಗೆ ಘೇರಾವ್ ಹಾಕಿತು. ಈ ವೇಳೆ ಸ್ಥಳದಲ್ಲಿದ್ದ ಇನ್ನೊಂದು ಗುಂಪು ಇದನ್ನು ತಡೆಯಲು ಮುಂದಾಯಿತು.
ಈ ಹಂತದಲ್ಲಿ ಎರಡೂ ಗುಂಪುಗಳ ನಡುವೆ ಕೂಗಾಟ, ನೂಕಾಟ ನಡೆಯಿತು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ-ಕೈ ಮಿಲಾಯಿಸಿದರು. ಘರ್ಷಣೆಯಲ್ಲಿ ಹಲವರಿಗೆ ಸಣ್ಣ-ಪುಟ್ಟ ಗಾಯಗಳಾದವು.
ಗಾಯಗೊಂಡ ಆರೋಗ್ಯ ಸ್ವಾಮಿ, ಮುನಿದಾಸ ಸ್ವಾಮಿ, ಜರ್ಸಿ ಕುಮಾರ್, ಕುಮಾರ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಆರೋಗ್ಯ ಮಾತೆ ಚರ್ಚ್ನ ಉಸ್ತುವಾರಿ ಪ್ರಾನ್ಸಿಸ್ ಸೆರಾವೊ ಅವರಿಗೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸದ ಕಾರಣ ಘೇರಾವ್ ಹಾಕಬೇಕಾಯಿತು ಎಂದು ಪ್ರತಿಭಟನಾ ನಿರತರು ಹೇಳಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಆರೋಗ್ಯಸ್ವಾಮಿ ಸುರೇಶ ಕುಮಾರ ಮಾತನಾಡಿ, ಫಾದರ್ ಕೆ.ಎ ಜಾರ್ಜ್ ಕಳೆದ 2 ವರ್ಷಗಳಿಂದ ಧರ್ವಧಿಕಾರಿಗಳಾಗಿದ್ದಾರೆ. ಅಧಿಕಾರ ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ಲೆಕ್ಕಪತ್ರದ ವಿವರವನ್ನು ಚರ್ಚ್ ಪಾಲನಾ ಸಮಿತಿಗಾಗಲಿ, ಕ್ರೈಸ್ತ ಸಮುದಾಯದವರಿಗಾಗಲಿ ನೀಡಿಲ್ಲ. ಈ ಬಗ್ಗೆ ಶಿವಮೊಗ್ಗದ ಬಿಷಪ್ ಅವರಿಗೂ ಮನವಿ ಸಲ್ಲಿಸಲಾಗಿದ್ದು ಇದುವರೆಗೆ ಲೆಕ್ಕ ಪತ್ರ ನೀಡುತ್ತಿಲ್ಲ ಎಂದು ದೂರಿದರು.
ಚರ್ಚ್ ನವಿಕರಣ ಮತ್ತು ದುರಸ್ತಿಗೆ 20- 22ಲಕ್ಷ ರೂ. ನೀಡಿದ ಮಾಹಿತಿ ಇದ್ದು, ದುರಸ್ಥಿ, ನವೀಕರಣಕ್ಕಾಗಿ ಅನೇಕ ದಾನಿಗಳು ಸಿಮೆಂಟ್ ಮತ್ತಿತರೆ ಸಾಮಗ್ರಿ ನೀಡಿದ್ದಾರೆ. ಹಳೆ ಚರ್ಚ್ ರಿಪೇರಿ ಮತ್ತು ನವೀಕರಣಕ್ಕಾಗಿ ಸಂಗ್ರಹವಾದ ಹಣದ ಬಗ್ಗೆ ಜನರಿಗೆ ಲೆಕ್ಕಪತ್ರ ಒಪ್ಪಿಸುವಂತೆ ಮನವಿ ಮಾಡಿದ್ದರು ಯಾವುದೇ ಮಾಹಿತಿ ನೀಡಿಲ್ಲ ಎಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾನ್ಸಿಸ್ ಸೆರಾವೊ, ಪಾಲನಾ ಪರಿಷತ್ನ ಆರೋಪಗಳ ಕುರಿತು ರ್ಚಚಿಸಲು ಇಂದಿನಿಂದ ಮೂರು ದಿನಗಳ ಕಾಲ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಾಲನಾ ಸಮಿತಿಗೆ ತನ್ನ ವಾದ ಮಂಡಿಸಲು ಅವಕಾಶವಿತ್ತು, ಆದರೆ ಏಕಾಏಕಿ ಈ ರೀತಿ ವರ್ತನೆ ತೋರಿದ್ದ ಸರಿಯಲ್ಲ ಎಂದು ಅಸಮಧಾನ ವ್ಯಕ್ತ ಪಡಿಸಿದರು.
ಹರಿಹರ ಚರ್ಚ್ನಲ್ಲಿ ಅನೇಕ ವರ್ಷಗಳಿಂದ ಸಮಸ್ಯೆಯಿದೆ. ಇಲ್ಲಿ ಕರ್ತವ್ಯ ನಿರ್ವಹಿಸಿದ ಹಿಂದಿನ ಧರ್ಮ ಗುರುಗಳು ನೋವು ಅನುಭವಿಸಿ ಕಣ್ಣಿರು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆಗೆ ಶಾಶ್ವತ ಇತಿಶ್ರೀ ಹಾಡಲು ಸಭೆ ಆಯೋಜಿಸಲಾಗಿತ್ತು. ಅದರೆ ಇಂದಿನ ಘಟನೆ ನೋಡಿದರೆ ಇವರಿಗೆ ಸಮಸ್ಯೆ ಬಗೆಹರಿಯುವುದು ಇಷ್ಟವಿದ್ದಂತಿಲ್ಲ. ಆದರೂ ಭಕ್ತರ ಮನಸ್ಸಿನಲ್ಲಿರುವ ಗೊಂದಲಗಳಿಗೆ ಶೀಘ್ರವೇ ಉತ್ತರ ಸಿಗಲಿದೆ ಎಂದರು.
ಹರಿಹರ ಚರ್ಚ್ನ ಫಾದರ್ ಕೆ.ಎ.ಜಾರ್ಜ್ ಮಾತನಾಡಿ ಪಾಲನಾ ಸಮಿತಿ ಸದಸ್ಯರು ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರ. ಚರ್ಚ್ ನಿರ್ವಹಣೆಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಆಯಾ ಸಮಿತಿಗಳು ತಮ್ಮ ಕೆಲಸ ಮಾಡುತ್ತಿವೆ. ಸಮಸ್ಯೆಗಳಿದ್ದರೆ ಗಮನಕ್ಕೆ ತರಬಹುದಿತ್ತು ಎಂದು ತಿಳಿಸಿದರು.
ಕೆಲವರು ಉದ್ದೇಶಪೂರ್ವಕವಾಗಿ ನಮ್ಮ ಮತ್ತು ಭಕ್ತರ ನಡುವೆ ಭಿನ್ನಾಭಿಪ್ರಾಯ ಮೂಡಿಸಲೆಂದೇ ಹಣಕಾಸು, ಲೆಕ್ಕಪತ್ರ, ಲೈಂಗಿಕ ದೌರ್ಜನ್ಯ ಸೇರಿ ಮನಬಂದಂತೆ ಆರೋಪಿಸುತ್ತಿರುವುದು ಖಂಡನೀಯ. ಬಿಷಪ್ ಪ್ರಾನ್ಸಿಸ್ ಸೆರಾವೊ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾಲನಾ ಸಭೆಯಲ್ಲಿ ಎಲ್ಲ ಆರೋಪಕ್ಕೆ ಭಕ್ತರ ಸಮ್ಮುಖದಲ್ಲಿ ಉತ್ತರ ನೀಡಲು ಸಿದ್ದನಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪಾಲನಾ ಸಮಿತಿಯ ಲಾರೆನ್ಸ್, ಆಗಷ್ಟಿನ್, ಜೊಸೆಪ್ ಕುಮಾರ, ಆರ್.ಎನ್. ಜಾನ್, ಪ್ರಾನ್ಸಿಸ್ ಜೆ, ರಾಜಣ್ಣ, ಅಲ್ಬರ್ಟ್, ಆಂಟಿನಿ ಕ್ರೋಷ್, ವಿನೋದ್ರಾಜನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.