

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮನುಷ್ಯನಿಗೆ ಜೀವನದುದ್ದಕ್ಕೂ ಲಭಿಸುವ ವಿವಿಧ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಎಲ್ಲಕ್ಕಿಂತ ಮಿಗಿಲಾಗಿದ್ದು. ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಜೀವನದ ಎಲ್ಲ ಹಂತಗಳನ್ನು ಯಶಸ್ವಿಯಾಗಿ ತಲುಪಲು ಮತ್ತು ಅಂದುಕೊಂಡಿದನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ಕುಂದಗೋಳ ಕಲ್ಯಾಣಪುರಮಠದ ಅಭಿನವ ಶ್ರೀ ಬಸವಣ್ಣಜ್ಜನವರು ಹೇಳಿದರು.
ಹುಬ್ಬಳ್ಳಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಕುಂದಗೋಳದ ತ್ರಿವಿಧ ದಾಸೋಹಿ ಶ್ರೀ ಬಸವಣ್ಣಜ್ಜನವರ ಕಲ್ಯಾಣಪುರಮಠ ಗಳ ಸಂಯುಕ್ತಾಶ್ರಯದಲ್ಲಿ ಮಠದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿಯಿಂದ ಪ್ರಸ್ತುತ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು, ಗ್ರಾಮೀಣ ಪ್ರದೇಶದ ಬಡ ಜನರ ಆರೋಗ್ಯ ಸುಧಾರಣೆಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವ ಬಾಲಾಜಿ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಬಾಲಾಜಿ ಆಸ್ಪತ್ರೆ ವತಿಯಿಂದ ಗ್ರಾಮೀಣ ಭಾಗದ ಜನರಿಗೂ ನಮ್ಮ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಶ್ರೀಮಠದ ಸಹಯೋಗದೊಂದಿಗೆ ಉಚಿತ ಶಿಬಿರ ಆಯೋಜಿಸಲಾಗಿದೆ. ಇಲ್ಲಿ ತಪಾಸಣೆ ಮಾತ್ರವಲ್ಲದೇ ಉಚಿತ ಔಷಧ ನೀಡುವ ಜತೆಗೆ ಅಗತ್ಯವಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉನ್ನತ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆಯನ್ನೂ ಸಹ ರಿಯಾಯಿತಿ ದರದಲ್ಲಿ ಮಾಡುವ ಬಗ್ಗೆ ಚಿಂತಿಸಲಾಗಿದೆ ಎಂದರು.
ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಹಬೀದ್ ಹುಸೇನ್, ಡಾ. ಜಯಮೇಜಯ, ಡಾ. ಅಖಿಲೇಶ ಜೋಶಿ, ಮುಖಂಡರಾದ ಗುರುಪಾದಪ್ಪ, ಇತರರಿದ್ದರು.
ಶಿಬಿರದಲ್ಲಿ ಬಿಪಿ/ಶುಗರ್, ಎಲುಬು-ಕೀಲು, ನರರೋಗ, ಹೃದ್ರೋಗ, ಇತರೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸಿ, ಔಷಧ ವಿತರಿಸಿದರು. 130ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.