ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಶೀಘ್ರದಲ್ಲೇ ಎಆರ್​ಒ

prahlad joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಹಾಯಕ ಪ್ರಾದೇಶಿಕ ಕಚೇರಿ (ಎಆರ್​ಒ) ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯ ಹೊಸ ಹುದ್ದೆಗಳ ಮಂಜೂರಾತಿಗೆ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸಿವಿಲ್ ಎವಿಯೇಷನ್ ಸೆಕ್ಯೂರಿಟಿ ಲೈಸನ್ ಆಫೀಸರ್ ಹುದ್ದೆಗಳನ್ನು ಬದಲಾಯಿಸಿ ದೇಶದಲ್ಲಿ 13 ಹೊಸ ಎಆರ್​ಒ ಆರಂಭಿಸಲು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ಇದರಲ್ಲಿ ಹುಬ್ಬಳ್ಳಿಯೂ ಒಂದಾಗಿದೆ. ಇದಕ್ಕೆ ಸಹಾಯಕ ನಿರ್ದೇಶಕರು (ಎಡಿ) ಮುಖ್ಯಸ್ಥರಾಗಿರುತ್ತಾರೆ. ಈಗ ಕೇಂದ್ರ ಹಣಕಾಸು ಸಚಿವಾಲಯ ಒಬ್ಬ ಎಡಿ, ಇಬ್ಬರು ಸಹಾಯಕ ಸಿಬ್ಬಂದಿ ಹಾಗೂ ಡಿ ದರ್ಜೆ ಹುದ್ದೆಗಳಿಗೆ ಮಂಜೂರಾತಿ ನೀಡಿದೆ ಎಂದರು.

ಇದರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳು ಹಾಗೂ ಭದ್ರತೆಗೆ ವಿಷಯಗಳಿಗೆ ಬೆಂಗಳೂರು ಪ್ರಾದೇಶಿಕ ಕಚೇರಿಯ ಅವಲಂಬನೆ ತಪ್ಪಲಿದೆ. ಜತೆಗೆ ಬೆಂಗಳೂರು, ಮಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ವಿಮಾನ ನಿಲ್ದಾಣಗಳು ಭದ್ರತೆ ವಿಷಯದಲ್ಲಿ ಹುಬ್ಬಳ್ಳಿ ಎಆರ್​ಒ ವ್ಯಾಪ್ತಿಗೆ ಒಳಪಡಲಿದೆ ಎಂದು ಹೇಳಿದರು.

ಸ್ಥಳೀಯ ಪ್ರಯಾಣಿಕರು ಅಹಿತಕರ ಘಟನೆ, ಕಳವು, ಇನ್ನಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಆರ್​ಒ ಕಚೇರಿಗೆ ದೂರು ನೀಡಬಹುದಾಗಿದೆ. ಮಳಿಗೆಗಳ ಆರಂಭಕ್ಕೆ ಎನ್​ಒಸಿ, ಅನುಮೋದನೆಯನ್ನು ಇದೇ ಕಚೇರಿಯಿಂದ ಪಡೆಯಬಹುದಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಎಆರ್​ಒ ಪೂರಕವಾಗಲಿದೆ. ಪ್ರಗತಿಯಲ್ಲಿರುವ ಹೊಸ ಟರ್ವಿುನಲ್ ನಿರ್ಮಾಣ ಕಾಮಗಾರಿ, ಸುವ್ಯವಸ್ಥೆ ಹಾಗೂ ಸುರಕ್ಷತೆಗೆ ಹೆಚ್ಚಿನ ಬಲ ಬರಲಿದೆ ಎಂದರು.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾದೇಶಿಕ ಕಚೇರಿಯ ಬಲವರ್ಧನೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, 19 ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ. ನೋಯ್ಡಾ, ಚಂಡಿಗಢ, ಗೋವಾ ಹಾಗೂ ಇಟಾನಗರದಲ್ಲಿ ಹೊಸದಾಗಿ ಪ್ರಾದೇಶಿಕ ಕಚೇರಿ ಆರಂಭಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net