ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದ್ದರೂ ರಸ್ತೆ ಬದಿ ಮಲಗಿದ ಅಭ್ಯರ್ಥಿಗಳು

Published on

ಉಡುಪಿ: ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ‌್ಯಾಲಿ ನಡೆಯುತ್ತಿದ್ದು, 10 ದಿನಗಳ ಕಾಲ 38 ಸಾವಿರ ಮಂದಿ ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಈ ನಡುವೆ ರಸ್ತೆಬದಿ, ಫುಟ್‌ಪಾತ್ ಮೇಲೆ ಭಾವಿ ಸೈನಿಕರು ಮಲಗಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಮಾಡದ ಸಕಲ ವ್ಯವಸ್ಥೆಯನ್ನು ಉಡುಪಿಯಲ್ಲಿ ಸಂಘ, ಸಂಸ್ಥೆಗಳ ನೆರವಿನಿಂದ ಜಿಲ್ಲಾಡಳಿತ ನಗರದಲ್ಲಿ 6 ಕಡೆಗಳಲ್ಲಿ ಸೇನೆಯ ಅಭ್ಯರ್ಥಿಗಳಿಗೆ ತಂಗಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಊಟೋಪಚಾರದ ವ್ಯವಸ್ಥೆ. ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ. ಅಜ್ಜರಕಾಡು ಭುಜಂಗ ಪಾರ್ಕಿನಿಂದ ಸರ್ಕಾರಿ ಆಸ್ಪತ್ರೆಯ ತನಕ ಉದ್ದಕ್ಕೂ ಹೊರಜಿಲ್ಲೆಗಳಿಂದ ಆಗಮಿಸಿದ್ದ ಆಕಾಂಕ್ಷಿಗಳು ರಸ್ತೆ ಬದಿಯ ಫುಟ್‌ಪಾತ್‌ಮೇಲೆ ಮಲಗಿದ್ದರು. ಬೆಳಗ್ಗೆ ನಾಲ್ಕು ಗಂಟೆಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅಭ್ಯರ್ಥಿಗಳಿಗೆ ಸೇನಾ ನೇಮಕಾತಿ ರ‌್ಯಾಲಿ ಆರಂಭವಾಗುತ್ತದೆ. ಈಗಾಗಿ ಅಭ್ಯರ್ಥಿಗಳು ಬೇರೆ ಕಡೆಗಳಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರೂ, ಬೆಳಗ್ಗೆ ಬೇಗನೆ ಸರತಿಯಲ್ಲಿ ನಿಲ್ಲಬೇಕೆಂಬ ಬಯಕೆಯಿಂದ ಹತ್ತಿರದ ರಸ್ತೆ ಬದಿಗಳಲ್ಲಿ ಮಲಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net