

ಬೆಳಗಾವಿ: ನವರಾತ್ರಿ ಪ್ರಯುಕ್ತ ನಗರದಲ್ಲಿ ನಡೆಯುತ್ತಿರುವ 27ನೇ ವರ್ಷದ ದುರ್ಗಾಮಾತಾ ದೌಡ್ನಲ್ಲಿ ಮೂರನೇ ದಿನವಾದ ಬುಧವಾರ ಸೇನಾಧಿಕಾರಿಗಳು ಪಾಲ್ಗೊಂಡು, ದೌಡ್ಗೆ ವಿಶೇಷ ಮೆರಗು ತಂದರು.
ನಗರದ ಮಿಲಿಟರಿ ಮಹಾದೇವಿ ಮಂದಿರದಿಂದ ಆರಂಭಗೊಂಡ ದೌಡ್ಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಮರಾಠಾ ಲು ಪದಾತಿದಳದ ಕಮಾಂಡೆಂಟ್ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ ಮತ್ತು ಸುಬೇದಾರ ಮೇಜರ್ ಸಂದೀಪ ಖೋತ್ ಚಾಲನೆ ನೀಡಿ, ಧ್ವಜ ಹಿಡಿದು ಸ್ವಲ್ಪ ದೂರ ಓಟದಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು.
ಬಳಿಕ ಓಟವು ಛತ್ರಪತಿ ಶಿವಾಜಿ ಮಾರ್ಗ(ಹೈ ಸ್ಟ್ರೀಟ್), ಕ್ಯಾಂಪ್ ಪ್ರಮುಖ ಬೀದಿಗಳು, ಕೊಂಡಪ್ಪ ಸ್ಟ್ರೀಟ್, ಫಿಶ್ ಮಾರ್ಕೆಟ್, ತೆಲಗು ಕಾಲನಿ, ಶ್ರೀ ಶಂಭು ತೀರ್ಥ ಮಾರ್ಗ ಮೂಲಕ ಸಂಚರಿಸಿ ಜತ್ತಿಮಠ ಬಳಿ ಸಮಾರೋಪಗೊಂಡಿತು.
ಭಾವೈಕ್ಯತೆಯ ಸ್ವಾಗತ: ಕ್ಯಾಂಪ್ ಪ್ರದೇಶದಲ್ಲಿ ಭಾವೈಕ್ಯತೆಯ ಸ್ವಾಗತ ಲಭಿಸಿತು. ಮುಸ್ಲಿಂ ಸಮುದಾಯದ ಪರವಾಗಿ ಸಾಜಿದ್ ಶೇಖ್ ಮತ್ತು ಗೆಳೆಯರು, ದೌಡನ್ನು ತಮ್ಮ ಬಡಾವಣೆಗೆ ಸ್ವಾಗತಿಸಿಕೊಂಡು ಭಾವೈಕ್ಯತೆಗೆ ಬೆಳಗಾವಿ ಸಾಕ್ಷಿಯಾಗಬೇಕಿದೆ. ನಾವೆಲ್ಲರೂ ಒಂದಾಗಿ ಪರಸ್ಪರ ಹಬ್ಬ ಆಚರಿಸಬೇಕಿದೆ ಎಂಬ ಸಂದೇಶ ಸಾರಿದರು. ದೌಡ್ನಲ್ಲಿ ಸಾಗುತ್ತಿದ್ದ ಯುವಕ, ಯವತಿಯರಿಗೆ ಪಾನೀಯ ಮತ್ತು ಬಾಳೆಹಣ್ಣು ವಿತರಿಸಿದರು.