

ಬೆಳಗಾವಿ: ‘ಯುದ್ಧದಲ್ಲಿ ಗಾಯಗೊಂಡ ಯೋಧರನ್ನು ಅಂಗವಿಕಲರೆಂದು ಕಾಣುವ ಬದಲಿಗೆ, ವಿಶೇಷ ಸಾಮರ್ಥ್ಯ ಉಳ್ಳವರೆಂದು ಕಾಣಬೇಕು. ಅವರು ತಮ್ಮ ಮನೋಸ್ಥೈರ್ಯ, ದೃಢಸಂಕಲ್ಪದಿಂದಾಗಿ ಅಂಗವೈಕಲ್ಯವನ್ನೂ ಮೀರಿ, ಧೈರ್ಯದಿಂದ ಜೀವನ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ನಿವೃತ್ತ ಮೇಜರ್ ಜನರಲ್ ಸಿ.ಡಿ.ಸಾವಂತ ಹೇಳಿದರು.
ನಗರದ ಮರಾಠ ಲಘು ಪದಾತಿ ದಳ ಕೇಂದ್ರ (ಎಂಎಲ್‌ಐಆರ್‌ಸಿ)ದಲ್ಲಿ ಯುದ್ಧದಲ್ಲಿ ಗಾಯಗೊಂಡ ಯೋಧರಿಗಾಗಿ ವಾರ್ ವೌಂಡೆಡ್ ಫೌಂಡೇಷನ್ ಮಂಗಳವಾರ ಹಮ್ಮಿಕೊಂಡಿದ್ದ ರ್‍ಯಾಲಿಯಲ್ಲಿ ಅವರು ಮಾತನಾಡಿದರು.
‘ದೇಶದ ಗಡಿ ಕಾಯುವಾಗ ಮತ್ತು ವಿವಿಧ ಆಪರೇಷನ್‌ಗಳ ವೇಳೆ, ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‌ಎಫ್), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಮತ್ತು ಇಂಡೋ–ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರು ಗಾಯಗೊಂಡಿರುತ್ತಾರೆ. ಅಂಥವರಿಗೂ ನೆರವಾಗಬೇಕು. ಆಗ ಫೌಂಡೇಷನ್‌ಗೆ ಬರುವ ಆರ್ಥಿಕ ನೆರವಿನ ಪ್ರಮಾಣವೂ ಹೆಚ್ಚುತ್ತದೆ’ ಎಂದರು.
ಫೌಂಡೇಷನ್ ಅಧ್ಯಕ್ಷ, ನಿವೃತ್ತ ಲೆಫ್ಟಿನೆಂಟ್ ಜನರಲ್ ಆಸಿತ್ ಮಿಸ್ತ್ರಿ, ‘ಯುದ್ಧದಲ್ಲಿ ಗಾಯಗೊಂಡವರ ನೆರವಿಗೆ ಬರಲು ನಾವು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಯುದ್ಧದಲ್ಲಿ ಗಾಯಗೊಂಡವರು ಮತ್ತು ಅವರ ಕುಟುಂಬ ಸದಸ್ಯರ ಒತ್ತಡ, ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ ಸಹ ಆರಂಭಿಸಿದ್ದೇವೆ. ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಐಟಿಬಿಪಿ ಯೋಧರನ್ನು ಫೌಂಡೇಷನ್‌ಗೆ ಸೇರಿಸಿಕೊಳ್ಳುವ ಕುರಿತ ಸಲಹೆ ಪರಿಗಣಿಸುತ್ತೇವೆ’ ಎಂದು ತಿಳಿಸಿದರು.
‘ತರಬೇತಿ ಸಮಯದಲ್ಲೇ ಗಾಯಗೊಳ್ಳುವ ಹಲವು ಕೆಡೆಟ್‌ಗಳು ಸೇವೆಗೆ ಹಾಜರಾಗುವುದೇ ಇಲ್ಲ. ಸರ್ಕಾರವೂ ಅವರನ್ನು ಮಾಜಿ ಸೈನಿಕರೆಂದು ಗುರುತಿಸುವುದಿಲ್ಲ. ಅಂಥವರನ್ನು ಫೌಂಡೇಷನ್‌ಗೆ ಸೇರಿಸಿಕೊಂಡು ಸಹಾಯ ಮಾಡುತ್ತಿದ್ದೇವೆ’ ಎಂದರು.
ಎಂಎಲ್‌ಐಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ, ‘ಯುದ್ಧದಲ್ಲಿ ಗಾಯಗೊಂಡವರಿಗೆ ಎಂಎಲ್‌ಐಆರ್‌ಸಿಯಿಂದ ಸಹಾಯ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಫೌಂಡೇಷನ್‌ನ ದಕ್ಷಿಣ ಪ್ರಾದೇಶಿಕ ನಿರ್ದೇಶಕ, ನಿವೃತ್ತ ಬ್ರಿಗೇಡಿಯರ್ ಸಿ.ಸಂದೀಪಕುಮಾರ್, ‘ಇಷ್ಟು ದಿನ ಉತ್ತರ ಭಾರತದಲ್ಲಿ ಮಾತ್ರ ರ್‍ಯಾಲಿ ಸಂಘಟಿಸುತ್ತಿದ್ದೆವು. ಇದೇ ಮೊದಲ ಬಾರಿ ದಕ್ಷಿಣ ಭಾರತದಲ್ಲೂ ಆಯೋಜಿಸಿದ್ದೇವೆ. ಇಡೀ ದೇಶದಲ್ಲಿರುವ ಎಲ್ಲರಿಗೂ ನೆರವಾಗುವುದು ನಮ್ಮ ಉದ್ದೇಶ’ ಎಂದರು.